ರೈತರಿಗೆ ದಿಲ್ಲಿ ಪ್ರವೇಶಿಸಲು ಅನುಮತಿಸಿದ ಪೊಲೀಸರು

Update: 2020-11-27 16:21 GMT

 ಹೊಸದಿಲ್ಲಿ,ನ.27: ಶುಕ್ರವಾರ ಬೆಳಿಗ್ಗೆ ಹರ್ಯಾಣ ಗಡಿಯಲ್ಲಿ ಪೊಲೀಸರೊಂದಿಗೆ ಘರ್ಷಣೆಗಳ ಬಳಿಕ ನೂತನ ಕೃಷಿ ಕಾನೂನುಗಳ ವಿರುದ್ಧ ತಮ್ಮ ಯೋಜಿತ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ದಿಲ್ಲಿಯನ್ನು ಪ್ರವೇಶಿಸಲು ಆಂದೋಲನ ನಿರತ ಸಹಸ್ರಾರು ರೈತರಿಗೆ ಕೇಂದ್ರ ಸರಕಾರವು ಅನುಮತಿ ನೀಡಲಾಗಿದೆ.

ರೈತರು ಪೊಲೀಸರ ಬೆಂಗಾವಲಿನೊಂದಿಗೆ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸಬಹುದು ಎಂದು ದಿಲ್ಲಿ ಪೊಲೀಸರು ಪ್ರಕಟಿಸಿದ ಬಳಿಕವೂ ಗುಂಪುಗಳನ್ನು ನಿಯಂತ್ರಿಸಲು ಅವರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗ ಮುಂದುವರಿದಿತ್ತು. ಹಲವಾರು ರೈತರು ಗಾಯಗೊಂಡಿದ್ದಾರೆ.

ರೈತರ ಗುಂಪುಗಳು ಆಹಾರ ಮತ್ತು ಅಗತ್ಯ ಸಾಮಗ್ರಿಗಳೊಂದಿಗೆ ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳಲ್ಲಿ ಹಲವಾರು ಕಡೆಗಳಿಂದ ದಿಲ್ಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದವು. ತಮ್ಮನ್ನು ತಡೆಯಲು ಅಳವಡಿಸಲಾಗಿದ್ದ ಮುಳ್ಳುತಂತಿಯ ಬ್ಯಾರಿಕೇಡ್‌ ಗಳು ಮತ್ತು ರಸ್ತೆಗಳಲ್ಲಿ ತೋಡಲಾಗಿದ್ದ ಗುಂಡಿಗಳನ್ನು ರೈತರು ಲೆಕ್ಕಿಸಿರಲಿಲ್ಲ. ದಿಲ್ಲಿಯನ್ನು ಪ್ರವೇಶಿಸಲು ಮತ್ತು ರಾಜಧಾನಿಯ ಹೊರವಲಯದ ಸಮೀಪ ಬುರಾರಿಯ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತಮಗೆ ಅನುಮತಿ ನೀಡಲಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿದವು.

ದಿಲ್ಲಿಯ ಹೊರವಲಯದ ಕೆಲವು ಕಡೆಗಳಲ್ಲಿ ರೈತರನ್ನು ತಡೆಯಲು ಪೊಲೀಸರು ಹಲವಾರು ಸುತ್ತು ಅಶ್ರುವಾಯ ಪ್ರಯೋಗದ ಜೊತೆಗೆ ಜಲಫಿರಂಗಿಯನ್ನೂ ಬಳಸಿದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರುತ್ತಿರುವುದು ಕಂಡು ಬಂದಿತ್ತು. ಧ್ವಜಗಳು ಮತ್ತು ದೊಣ್ಣೆಗಳನ್ನು ಹಿಡಿದಿದ್ದ ರೈತರ ಗುಂಪುಗಳು ಬ್ಯಾರಿಕೇಡ್‌ಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದ್ದವು. ಸಿಂಘು ಮತ್ತು ಟಿಕ್ರಿ ಎಂಬಲ್ಲಿ ಪೊಲೀಸರೊಂದಿಗೆ ಘರ್ಷಣೆ ಸಂದರ್ಭ ಗಾಯಗೊಂಡಿರುವ ರೈತರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಹರ್ಯಾಣದಿಂದ ದಿಲ್ಲಿಯನ್ನು ಪ್ರವೇಶಿಸುವ ವಿವಿಧ ಸ್ಥಳಗಳಲ್ಲಿ ರೈತರು ಮತ್ತು ಪೊಲೀಸರ ನಡುವೆ ಸಂಘರ್ಷ ಐದು ಗಂಟೆಗಳಿಗೂ ಅಧಿಕ ಕಾಲ ಮುಂದುವರಿದಿತ್ತು. ‘ದಿಲ್ಲಿ ಚಲೋ’ ಪ್ರತಿಭಟನೆಗಾಗಿ ರೈತರು ದಿಲ್ಲಿಯನ್ನು ಪ್ರವೇಶಿಸುವುದನ್ನು ತಡೆಯಲು ಮುಳ್ಳುತಂತಿಗಳನ್ನು ಸುತ್ತಿದ್ದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು ಮತ್ತು ಮರಳು ತುಂಬಿದ್ದ ಟ್ರಕ್‌ಗಳನ್ನು ದಾರಿಗಡ್ಡವಾಗಿ ನಿಲ್ಲಿಸಲಾಗಿತ್ತು.

ಪೊಲೀಸರು ದಿಲ್ಲಿಗೆ ರೈತರ ಪ್ರವೇಶವನ್ನು ತಡೆಯಲು ಕೊರೋನ ವೈರಸ್ ನಿಯಮಗಳನ್ನು ಉಲ್ಲೇಖಿಸಿದರಾದರೂ,ಬಳಿಕ ರೈತರನ್ನು ಮುಂದಕ್ಕೆ ಸಾಗಲು ಅವಕಾಶ ನೀಡುವಂತೆ ಅವರಿಗೆ ಸೂಚನೆ ಲಭಿಸಿತ್ತು.

ಕೋವಿಡ್ ನಿಯಮಗಳನ್ನು ತಮಗೆ ಮಾತ್ರ ಏಕೆ ಅನ್ವಯಿಸಲಾಗುತ್ತಿದೆ ಎಂದು ಪ್ರಶ್ನಿಸಿದ ರೈತ ನಾಯಕರು,‘ಕೋವಿಡ್ ಪಿಡುಗು ಇದ್ದರೂ ಬಿಹಾರ ಚುನಾವಣೆ ನಡೆಯಿತು. ಕೃಷಿ ಕಾನೂನುಗಳನ್ನು ಅಂಗೀಕರಿಸಲು ಸಂಸತ್ತಿನ ಅಧಿವೇಶನವನ್ನೂ ನಡೆಸಿದ್ದರು. ನಾವು ಕೋವಿಡ್‌ಗೆ ಹೆದರುವುದಿಲ್ಲ.ಕೃಷಿ ಕಾನೂನುಗಳು ಅದಕ್ಕಿಂತಲೂ ಕೆಟ್ಟದಾಗಿವೆ ’ ಎಂದರು.

ಗಡಿಗಳಲ್ಲಿ ವಾಹನಗಳ ತಪಾಸಣೆಯಿಂದಾಗಿ ಗುರ್ಗಾಂವ್ ಮತ್ತು ದಿಲ್ಲಿ ನಡುವೆ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.

 ತಿಂಗಳುಗಳ ಕಾಲ ಪ್ರತಿಭಟನೆಯನ್ನು ನಡೆಸಲು ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ, ಉತ್ತರಾಖಂಡ, ಕೇರಳ ಮತ್ತು ಪಂಜಾಬ್‌ನ ರೈತರು ದಿಲ್ಲಿ ಚಲೋ ಹಮ್ಮಿಕೊಂಡಿದ್ದು, ರಾಜಧಾನಿಯ ಹೃದಯಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಳ್ಳಲು ಯೋಜಿಸಿದ್ದರು. 500 ಸಂಘಟನೆಗಳು ಈ ಆಂದೋಲನದಲ್ಲಿ ಭಾಗಿಯಾಗಿವೆ ಎನ್ನಲಾಗಿದೆ. ಮಾತುಕತೆಗಳಿಗೆ ಆಹ್ವಾನಿಸುವಂತೆ ಮತ್ತು ರೈತರ ಸಮಾವೇಶಕ್ಕೆ ಸ್ಥಳವನ್ನು ಒದಗಿಸುವಂತೆ ಕೋರಿ ತಾನು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಏಳು ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ತನ್ಮಧ್ಯೆ ರೈತರನ್ನು ತಡೆಯಲು ಭಾರೀ ಬಲವನ್ನು ಬಳಸುತ್ತಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರು, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರೈತರ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಮತ್ತು ಈ ಕೋವಿಡ್ ಸಮಯದಲ್ಲಿ ಅಗ್ಗದ ರಾಜಕೀಯವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿವಿಧ ಗಡಿ ಪ್ರದೇಶಗಳಲ್ಲಿ ರೈತರ ದಿಲ್ಲಿ ಪ್ರವೇಶವನ್ನು ತಡೆಯಲು ಪೊಲೀಸರ ಜೊತೆ ಸಿಐಎಸ್‌ಎಫ್,ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳನ್ನೂ ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News