ಐದನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಟಿಕ್ರಿ, ಸಿಂಘು ಗಡಿ ಬಂದ್

Update: 2020-11-30 17:14 GMT

ಹೊಸದಿಲ್ಲಿ, ನ.30: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 5ನೇ ದಿನವಾದ ಸೋಮವಾರವೂ ಮುಂದುವರಿದಿದ್ದು, ಗಡಿಭಾಗದಲ್ಲಿ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾ ನಿರತ ರೈತರು ಸೇರಿರುವುದರಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ತೀವ್ರ ಚಳಿಯಿಂದ ಆರೋಗ್ಯ ಹದಗೆಟ್ಟ ಕಾರಣ ಪ್ರತಿಭಟನಾ ನಿರತ ರೈತ ಹೃದಯಾಘಾತದಿಂದ ಮರಣ ಹೊಂದಿರುವುದಾಗಿ ವರದಿಯಾಗಿದೆ.

ತಮ್ಮ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸದಿದ್ದರೆ ರಾಷ್ಟ್ರೀಯ ರಾಜಧಾನಿ ದಿಲ್ಲಿಯನ್ನು ಸಂಪರ್ಕಿಸುವ ಐದು ಪ್ರವೇಶದ್ವಾರಗಳನ್ನು ತಡೆಗಟ್ಟಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ. ದಿಲ್ಲಿಯನ್ನು ಸಂಪರ್ಕಿಸುವ ಸೋನಿಪತ್, ರೋಹ್ಟಕ್, ಜೈಪುರ, ಘಾಜಿಯಾಬಾದ್-ಹಪುರ್ ಮತ್ತು ಮಥುರಾ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. 

ಈ ಮಧ್ಯೆ, ಸೋಮವಾರ ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸೋಮವಾರ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ ಉಭಯ ಸಚಿವರ ನಡುವಿನ ಎರಡನೇ ಭೇಟಿ ಇದಾಗಿದೆ. ಸರಕಾರ ರೈತರ ಎಲ್ಲಾ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಿದ್ಧವಿದೆ. ಆದರೆ ರೈತರು ತಮ್ಮ ಪ್ರತಿಭಟನೆಯನ್ನು ಸರಕಾರ ಗೊತ್ತುಪಡಿಸಿರುವ ನಿರಂಕಾರಿ ಮೈದಾನಕ್ಕೆ ಸ್ಥಳಾಂತರಿಸಬೇಕು ಎಂದು ಶಾ ಪುನರುಚ್ಚರಿಸಿದ್ದಾರೆ. ದಿಲ್ಲಿಯ ಗಡಿಭಾಗ ಟಿಕ್ರಿಯಲ್ಲಿ ಪ್ರತಿಭಟನಾ ನಿರತ ರೈತರೊಂದಿಗಿದ್ದ ಪಂಜಾಬ್‌ನ ರೈತ ಗಜ್ಜನ್ ಸಿಂಗ್ ಎಂಬಾತ ತೀವ್ರ ಚಳಿಯಿಂದ ಆರೋಗ್ಯ ಹದಗೆಟ್ಟು, ಹೃದಯಾಘಾತದಿಂದ ಮೃತನಾಗಿರುವುದಾಗಿ ರೈತರ ಮುಖಂಡರು ಹೇಳಿದ್ದಾರೆ. ಈ ಮಧ್ಯೆ ದಿಲ್ಲಿ ಗಡಿಯ ಟಿಕ್ರಿ ಮತ್ತು ಸಿಂಘು ಪ್ರವೇಶದ್ವಾರದಲ್ಲಿ ತಡೆ ಇರುವುದರಿಂದ ರಾಜಧಾನಿ ದಿಲ್ಲಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಪ್ರಯಾಣಿಕರು ಮತ್ತು ವಾಹನ ಸವಾರರು ಪರ್ಯಾಯ ರಸ್ತೆಯ ಮೂಲಕ ಸಾಗುವಂತೆ ದಿಲ್ಲಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಗಡಿಭಾಗದಲ್ಲಿ ಟೆಂಟ್ ಹಾಕಿ ತಂಗಿರುವ ಪ್ರತಿಭಟನಾ ನಿರತರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೆರವಾಗುತ್ತಿದ್ದಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ರೈತರಿಗೆ ನೆರವು ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಶಾಹೀನ್‌ಬಾಗ್ ಮಹಿಳೆಯರ ಬೆಂಬಲ

ಸೋಮವಾರ ಸಿಂಘು ಗಡಿಭಾಗಕ್ಕೆ ಆಗಮಿಸಿದ ಶಾಹೀನ್‌ಬಾಗ್‌ನ ಕೆಲವು ಮಹಿಳೆಯರು, ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. 500 ರೈತ ಸಂಘಟನೆಗಳ ಬೆಂಬಲ ಇರುವ ಈ ಪ್ರತಿಭಟನೆಯಲ್ಲಿ ಸುಮಾರು 3 ಲಕ್ಷ ರೈತರು ಪಾಲ್ಗೊಂಡಿದ್ದು 2 ತಿಂಗಳಿಗೂ ಹೆಚ್ಚು ಸಮಯ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ರೈತರ ಮುಖಂಡರು ಹೇಳಿದ್ದಾರೆ.

ಪ್ರತಿಭಟನೆಗೆ ಖಾಪ್ಸ್ ಮುಖಂಡರು

ಹರ್ಯಾಣದ ಹಲವು ಖಾಪ್ಸ್(ಜಾತಿ, ಸಮುದಾಯದ ಮುಖಂಡರ ಸಮಿತಿ)ಗಳ ಮುಖಂಡರು ಸೋಮವಾರ ಸಭೆ ಸೇರಿ, ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪ್ರತಿಭಟನೆಗೆ ಕೈಜೋಡಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ. ರೋಹ್ಟಕ್‌ನಲ್ಲಿ ನಡೆದ 30 ಖಾಪ್ಸ್ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ . ದಿಲ್ಲಿಯ ಪಾಲಂ ಖಾಪ್‌ನ ಮುಖ್ಯಸ್ಥ ರಾಮ್‌ಕರಣ್ ಸೋಲಂಕಿಯವರೂ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹರ್ಯಾಣದ ಪಕ್ಷೇತರ ಶಾಸಕ ಸೋಂಬಿರ್ ಸಂಗ್ವಾನ್ ಹೇಳಿದ್ದಾರೆ.

ರೈತರ ತಾತ್ಕಾಲಿಕ ಆಶ್ರಯತಾಣಗಳಾಗಿರುವ ಟ್ರ್ಯಾಕ್ಟರ್ ಟ್ರಾಲಿಗಳು, ಕೃಷಿ ಉಪಕರಣಗಳು

ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಾಗಿ ದಿಲ್ಲಿಯ ಗಡಿಗಳಲ್ಲಿ ಜಮಾಯಿಸಿರುವ ಸಾವಿರಾರು ರೈತರ ಪಾಲಿಗೆ ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು ಪ್ರಮುಖ ಕೃಷಿ ಉಪಕರಣಗಳೇ ತಾತ್ಕಾಲಿಕ ಆಶ್ರಯತಾಣಗಳಾಗಿ ಪರಿವರ್ತನೆಗೊಂಡಿವೆ.

ಪ್ರದೇಶದಲ್ಲಿ ತಾಪಮಾನ ಕುಸಿಯುತ್ತಿದ್ದು,ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸುತ್ತಿರುವ ರೈತರು ತೀವ್ರ ಚಳಿಯಿಂದ ಕೂಡಿರುವ ರಾತ್ರಿಗಳನ್ನು ಟರ್ಪಾಲುಗಳಿಂದ ಮುಚ್ಚಲಾಗಿರುವ ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಕಳೆಯುತ್ತಿದ್ದಾರೆ.

ಹೆಚ್ಚಿನ ರೈತರು ಪ್ರತಿ ಟ್ರ್ಯಾಕ್ಟರ್‌ಗೆ ಕನಿಷ್ಠ ಎರಡು ಟ್ರಾಲಿಗಳನ್ನು ಅಳವಡಿಸಿದ್ದು,ಒಂದರಲ್ಲಿ ಆಹಾರ ಪದಾರ್ಥಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ತುಂಬಿದ್ದರೆ,ಇನ್ನೊಂದನ್ನು ಪ್ರತಿಭಟನಾಕಾರರ ವಸತಿಗಾಗಿ ಬಳಸಲಾಗುತ್ತಿದೆ.

ಕೃಷಿತ್ಯಾಜ್ಯಗಳ ವಿಲೇವಾರಿ ರೈತರ ಪಾಲಿಗೆ ಪ್ರಮುಖ ಸವಾಲು ಆಗಿದೆಯಾದರೂ ಈಗ ಅವು ಅವರಿಗೆ ಉಪಯೋಗಿಯಾಗಿವೆ. ಹೆಚ್ಚಿನವರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಟ್ರಾಲಿಗಳಲ್ಲಿ ಅವುಗಳನ್ನು ದಪ್ಪವಾಗಿ ಜೋಡಿಸಿ ಅದರ ಮೇಲೆ ಹಾಸಿಗೆಗಳನ್ನು ಹಾಕಿಕೊಂಡಿದ್ದಾರೆ.

ಸೋನಿಪತ್ ಜಿಲ್ಲೆಯ ಅಂಬಾಲಾ-ದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಕಿ.ಮೀ.ಗೂ ಹೆಚ್ಚಿನ ರಸ್ತೆಯುದ್ದಕ್ಕೂ ಟ್ರ್ಯಾಕ್ಟರ್ ಟ್ರಾಲಿಗಳನ್ನು ನಿಲ್ಲಿಸಲಾಗಿದೆ. ಪ್ರತಿಭಟನಾಕಾರರಲ್ಲಿ ಪುರುಷ ರೊಂದಿಗೆ ಮಹಿಳೆಯರೂ ಸೇರಿದ್ದು,ಕೆಲವರು 70 ವರ್ಷಕ್ಕೂ ಹೆಚ್ಚಿನ ಪ್ರಾಯದವರಾಗಿದ್ದಾರೆ.

ಟ್ರ್ಯಾಕ್ಟರ್‌ಗಳ ಮೇಲೆ ಪಂಜಾಬ್ ಮತ್ತು ಹರ್ಯಾಣಗಳ ವಿವಿಧ ರೈತ ಸಂಘಟನೆಗಳ ಬಾವುಟಗಳು ಹಾರಾಡುತ್ತಿವೆ. ಕೆಲವು ಟ್ರ್ಯಾಕ್ಟರ್‌ಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು,ರೈತ ಸಂಘಟನೆಗಳ ನಾಯಕರು ಸಮಾವೇಶಗಳನ್ನುದ್ದೇಶಿಸಿ ಮಾತನಾಡಲು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ತನ್ಮಧ್ಯೆ ಸೋಮವಾರ ಗುರುನಾನಕ ಜಯಂತಿಯ ಅಂಗವಾಗಿ ರೈತರು ಪ್ರಾರ್ಥನೆಗಳನ್ನು ನಡೆಸಿ, ಪ್ರತಿಭಟನಾಕಾರರಿಗೆ ಪ್ರಸಾದವನ್ನೂ ಹಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News