ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ಸಂದರ್ಭ ಆಡಿಯೊ ನಿಶ್ಶಬ್ದವಾದದ್ದಕ್ಕೆ ಕಾರಣ ತಿಳಿಸಿದ ಸರಕಾರ

Update: 2020-11-30 16:11 GMT

ಹೊಸದಿಲ್ಲಿ, ನ.30: ವಿವಾದಾತ್ಮಕ ಕೃಷಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಂದರ್ಭ ರಾಜ್ಯಸಭೆಯ ಮೈಕ್ರೋಫೋನ್‌ಗಳನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮ್ಯೂಟ್(ನಿಶ್ಯಬ್ದ) ಮಾಡಿದ್ದರು ಎಂಬ ವಿಪಕ್ಷಗಳ ಆರೋಪವನ್ನು ನಿರಾಕರಿಸಿರುವ ಸರಕಾರ, ವಿಪಕ್ಷ ಸದಸ್ಯರು ಭಾರೀ ಗದ್ದಲ ಎಬ್ಬಿಸಿ ಮೈಕ್ರೋಫೋನ್‌ಗೆ ಹಾನಿ ಎಸಗಿದ್ದರಿಂದ ಆಡಿಯೊ ದಾಖಲಾಗಿಲ್ಲ ಎಂದು ಹೇಳಿದೆ.

‘ಸೆಪ್ಟಂಬರ್ 20ರಂದು ರಾಜ್ಯಸಭೆಯಲ್ಲಿ 2 ಕೃಷಿ ಮಸೂದೆಗಳನ್ನು ಮಂಡಿಸಿದ ಸಂದರ್ಭ ಮಧ್ಯಾಹ್ನ 1:05 ಗಂಟೆಯಿಂದ 1:35 ಗಂಟೆಯವರೆಗೆ ರಾಜ್ಯಸಭೆಯ ಕಲಾಪದ ಆಡಿಯೊ(ಶಬ್ದ, ಧ್ವನಿ) ಸಂಗ್ರಹಣೆಗೆ ಹಠಾತ್ ಅಡಚಣೆಯಾಗಿದೆ. ಕೆಲವು ಸಂಸದರು ರಾಜ್ಯಸಭಾ ಅಧ್ಯಕ್ಷರ ಮೈಕ್ರೋಫೋನ್‌ಗೆ ಹಾನಿ ಎಸಗಿದ್ದರಿಂದ ಹೀಗಾಗಿದೆ’ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲ್ಯುಡಿ) ರಾಜ್ಯಸಭಾ ಸೆಕ್ರೆಟೇರಿಯಟ್‌ಗೆ ಬರೆದಿರುವ ಪತ್ರದಲ್ಲಿ ಹೇಳಿದೆ.

ರಾಜ್ಯಸಭಾ ಅಧ್ಯಕ್ಷರ ಸೂಚನೆ ಪ್ರಕಾರ, ಅಧ್ಯಕ್ಷರ ಮೇಜಿನ ಮೇಲಿನ ಮೈಕ್ರೋಫೋನ್ ಹೊರತುಪಡಿಸಿ ಉಳಿದೆಲ್ಲಾ ಮೈಕ್ರೋಫೋನ್‌ಗಳನ್ನು ಬಂದ್ ಮಾಡಲಾಗಿತ್ತು. ಅಧ್ಯಕ್ಷರ ಎದುರಿಗಿದ್ದ ಮೈಕ್ರೋಫೋನ್‌ಗೂ ಹಾನಿಯಾದ್ದರಿಂದ ರಾಜ್ಯಸಭೆ ಟಿವಿಗೆ ರವಾನೆಯಾದ ಸುದ್ದಿಯಲ್ಲಿ ಆಡಿಯೊ ದಾಖಲಾಗಿಲ್ಲ. ಇದಕ್ಕೆ ಯಾವುದೇ ತಾಂತ್ರಿಕ ಸಮಸ್ಯೆ ಕಾರಣವಲ್ಲ. ಮಾರ್ಷಲ್‌ಗಳ ಮತ್ತು ಅಧಿಕಾರಿಗಳ ಅನುಮತಿ ಪಡೆದು ಮೈಕ್‌ಗಳನ್ನು ಬದಲಾಯಿಸಿದ ಬಳಿಕ ಆಡಿಯೊ ಸ್ಪಷ್ಟವಾಗಿ ದಾಖಲಾಗಿದೆ ಎಂದು ಸಿಪಿಡಬ್ಲ್ಯುಡಿಯ ಪತ್ರದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News