ಶೆಹ್ಲಾ ರಶೀದ್ ವಿರುದ್ಧ ತಂದೆಯಿಂದಲೇ ಆರೋಪ: ಸತ್ಯ ಏನು?

Update: 2020-12-01 06:58 GMT

ಹೊಸದಿಲ್ಲಿ : ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್  ಅವರು ತಮ್ಮ ತಂದೆ ಅಬ್ದುಲ್ ರಶೀದ್ ಶೋರಾ ಅವರು ತನ್ನ ಹಾಗೂ ತನ್ನ ತಾಯಿಯ  ವಿರುದ್ಧ ಮಾಡಿರುವ ಗಂಭೀರ ಆರೋಪಗಳನ್ನು ನಿರಾಕರಿಸಿದ್ದಾರೆ.  ಶೆಹ್ಲಾ  ದೇಶವಿರೋಧಿ  ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಹಾಗೂ ಆಕೆಯ ಎನ್‍ಜಿಒ ವಿರುದ್ಧ ತನಿಖೆ ನಡೆಸಬೇಕೆಂದು ಆಕೆಯ ತಂದೆ  ಆಗ್ರಹಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ  ಶೆಹ್ಲಾ, ಕೌಟುಂಬಿಕ ಹಿಂಸೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುಟುಂಬ ಶೋರಾ ವಿರುದ್ಧ  ದೂರು ನೀಡಿದ ನಂತರ  ನವೆಂಬರ್ 17ರಂದು ನ್ಯಾಯಾಲಯವು ಅವರಿಗೆ ತಮ್ಮ ಶ್ರೀನಗರ ನಿವಾಸಕ್ಕೆ ಪ್ರವೇಶ ನಿರ್ಬಂಧಿಸಿರುವುದರಿಂದ ಅವರು ಇಂತಹ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‍ಬಾಗ್ ಸಿಂಗ್ ಅವರಿಗೆ ಮೂರು ಪುಟಗಳ ಪತ್ರ ಬರೆದಿದ್ದ  ರಶೀದ್ ಶೋರಾ, ತನ್ನ ಜೀವಕ್ಕೆ ಶೆಹ್ಲಾ, ಆಕೆಯ ಅಂಗರಕ್ಷಕ, ಸಹೋದರಿ ಮತ್ತು ತಾಯಿಯಿಂದ ಅಪಾಯವಿದೆ ಎಂದು ದೂರಿದ್ದರಲ್ಲದೆ ಆಕೆ ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ಸೇರಲು ದೊಡ್ಡ ಮೊತ್ತ ಪಡೆದಿದ್ದಾರೆ ಹಾಗೂ ಆಕೆಯ ಎನ್‍ಜಿಒ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

``ಆಕೆ ಕಳೆದ ವರ್ಷ ಉಗ್ರರಿಗೆ ಹಣಕಾಸು ಸಹಾಯ ಒದಗಿಸಿದ ಪ್ರಕರಣದಲ್ಲಿ ಎನ್‍ಐಎಯಿಂದ ಬಂಧಿತರಾದ (ಮಾಜಿ ಶಾಸಕ) ಇಂಜಿನಿಯರ್ ರಶೀದ್ ಹಾಗೂ ಉದ್ಯಮಿ ಝಹೂರ್ ವತಾಲಿ ಅವರಿಂದ ಕಾಶ್ಮೀರದಲ್ಲಿ ರಾಜಕೀಯ ಸೇರಲು ರೂ 3 ಕೋಟಿ ಪಡೆದಿದ್ದಾಳೆ,'' ಎಂದು ಶೋರಾ ಆರೋಪಿಸಿದ್ದರು.

ಐಎಎಸ್ ಟಾಪರ್ ಶಾ ಫೈಸಲ್ ಅವರ ಜೆಕೆ ಪೊಲಿಟಿಕಲ್ ಮೂವ್ ಮೆಂಟ್‍ನ ಸ್ಥಾಪಕ ಸದಸ್ಯೆಯಾಗಿದ್ದ ಶೆಹ್ಲಾ ನಂತರ ಕಳೆದ ವರ್ಷ  ಕಾಶ್ಮೀರ ರಾಜಕೀಯದಿಂದ ದೂರ ಸರಿದಿದ್ದರು.

`ನಿರಾಧಾರ ಆರೋಪ' 

 ತಂದೆ ತನ್ನ ಮೇಲೆ ಹಾಗೂ ತನ್ನ ತಾಯಿ, ಸಹೋದರಿಯ ಮೇಲೆ ಮಾಡಿರುವ ಆರೋಪಗಳು ನಿರಾಧಾರ ಎಂದು  ಶೆಹ್ಲಾ ಹೇಳಿದ್ದಾರೆ. ಈ ಕುರಿತು ಆಕೆ ಟ್ವೀಟ್ ಕೂಡ ಮಾಡಿ ತಮ್ಮ ತಂದೆ,  ಹೆಂಡತಿಗೆ  ಹೊಡೆಯುತ್ತಿದ್ದರು ಹಾಗೂ  ಕುಟುಂಬ ಸದಸ್ಯರಿಗೆ ಹಿಂಸೆ ನೀಡುತ್ತಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೊನೆಗೂ ನಿರ್ಧರಿಸಿದ್ದೆವು, ಅದಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ, ಎಂದು ಹೇಳಿದ್ದಾರೆ.

''ನನ್ನ ತಾಯಿ ಸಾಕಷ್ಟು ಹಿಂಸೆ, ದೌರ್ಜನ್ಯ ಮತ್ತು ಕಿರುಕುಳವನ್ನು ಜೀವನಪರ್ಯಂತ ಸಹಿಸಿದ್ದಾರೆ.  ಕುಟುಂಬದ ಗೌರವಕ್ಕಾಗಿ ಆಕೆ ಸುಮ್ಮನಿದ್ದರು, ಆದರೆ ಈಗ ನಾವು  ಈ ದೌರ್ಜನ್ಯದ ವಿರುದ್ಧ ದನಿಯೆತ್ತಿದ್ದರಿಂದ ಅವರು  ನಮಗೆ ಕೂಡ ಕಿರುಕುಳ ನೀಡಲಾರಂಭಿಸಿದ್ದಾರೆ’’ ಎಂದು ಶೆಹ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News