"ಕೃತಿಚೌರ್ಯ'' ಆರೋಪ ಹೊತ್ತು ಟ್ರೋಲ್‍ಗೊಳಗಾದ ಮಧ್ಯಪ್ರದೇಶ ಮುಖ್ಯಮಂತ್ರಿ

Update: 2020-12-02 07:06 GMT

ಭೋಪಾಲ್ : ಕಳೆದ ತಿಂಗಳು ತಮ್ಮ ಮಾವ ತೀರಿಕೊಂಡಾಗ ಟ್ವಿಟ್ಟರ್‌ನಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕವನವೊಂದನ್ನು ಶೇರ್ ಮಾಡಿದ್ದರು. ಇದೀಗ ಅದೇ ವಿಚಾರದಲ್ಲಿ ಅವರು "ಕೃತಿಚೌರ್ಯ''ದ ಆರೋಪ ಎದುರಿಸಿ ಟ್ರೋಲ್‍ಗೊಳಗಾಗಿದ್ದಾರೆ.

ಚೌಹಾಣ್ ಅವರ ಮಾವ ಘನಶ್ಯಾಂ ದಾಸ್ ಮಸಾನಿ ತಮ್ಮ 88ನೇ ವಯಸ್ಸಿನಲ್ಲಿ ನವೆಂಬರ್ 18ರಂದು ನಿಧನರಾಗಿದ್ದರು. ಇದಾದ ನಾಲ್ಕು ದಿನಗಳ ನಂತರ ಚೌಹಾಣ್ ಅವರು ತನ್ನ ಟ್ವಿಟ್ಟರ್‌ನಲ್ಲಿ `ಭಾವ್ಜಿ'  (ಗೌರವಾನ್ವಿತ ತಂದೆ)ಎಂಬ ಶೀರ್ಷಿಕೆ ಇರುವ ಹಿಂದಿ ಕವನದ ಕೆಲವು ಸಾಲುಗಳನ್ನು ಹಂಚಿಕೊಂಡು ತನ್ನ ಮಾವನಿಗೆ ನುಡಿನಮನ ಸಲ್ಲಿಸಿದ್ದರಲ್ಲದೆ ಈ ಕವನವನ್ನು ತಮ್ಮ ಪತ್ನಿ ಸಾಧನಾ ಸಿಂಗ್ ಬರೆದಿದ್ದರೆಂದೂ ಹೇಳಿಕೊಂಡಿದ್ದರು.

ಆದರೆ  ನಂತರದ ಬೆಳವಣಿಗೆಯಲ್ಲಿ ಮಧ್ಯ ಪ್ರದೇಶ ಮೂಲದ ಲೇಖಕಿ ಹಾಗೂ ಬ್ರ್ಯಾಂಡಿಂಗ್ ತಜ್ಞೆ ಭೂಮಿಕಾ ಬಿರ್ತರೆ ಇದು ತಮ್ಮ ಕವನ ಎಂದು ಹೇಳಿಕೊಂಡ ನಂತರ ವಿವಾದ ಏರ್ಪಟ್ಟಿತ್ತು.

``ನಾನು ನಿಮ್ಮ ಸೋದರಸೊಸೆಯಂತೆ. ನನ್ನ ಕವನವನ್ನು ಕದ್ದು ನಿಮಗೇನು ದೊರೆಯುತ್ತದೆ? ಆ ಕವನವನ್ನು ನಾನು ಬರೆದಿದ್ದೆ. ``ಮಾಮಾ'' ಅವರು ಹಕ್ಕುಗಳ ರಕ್ಷಕರೆಂದು ತಿಳಿಯಲ್ಪಟ್ಟಿರುವುದರಿಂದ ನೀವು ನನ್ನ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅಂದುಕೊಂಡಿದ್ದೇನೆ,'' ಎಂದು ಭೂಮಿಕಾ ಸೋಮವಾರ ಟ್ವೀಟ್ ಮಾಡಿ ``ಮಾಮಾ-ಜಿ'' ಎಂದೇ ಜನಪ್ರಿಯರಾಗಿರುವ ಮುಖ್ಯಮಂತ್ರಿಯನ್ನು ಟ್ಯಾಗ್ ಮಾಡಿದ್ದಾರೆ.

``ಆ ಕವನದ ಶ್ರೇಯವನ್ನು ದಯವಿಟ್ಟು ನನಗೆ ನೀಡಿ ಸರ್. ಆ ಕವನವನ್ನು ನಾನು ಬರೆದಿದ್ದು ಹಾಗೂ ಅದರ ಶೀರ್ಷಿಕೆ ``ಡ್ಯಾಡಿ'' ಆಗಿದೆ `ಭಾವ್ಜಿ' ಅಲ್ಲ. ನನ್ನ ತಂದೆಯ  ಬಗ್ಗೆ ನನಗಿರುವ ಭಾವನೆಗಳಿಗೆ ಅನ್ಯಾಯ ಮಾಡಬೇಡಿ,'' ಎಂದು ಸರಣಿ ಟ್ವೀಟ್ ಮಾಡಿರುವ ಭೂಮಿಕಾ ಜತೆಗೆ ಪ್ರಧಾನಿ ನರೇಂದ್ರ ಮೋದಿಯನ್ನೂ ಟ್ಯಾಗ್ ಮಾಡಿದ್ದಾರೆ. ``ಆ ಕವನ ನಾನು ಬರೆದಿದ್ದು... ನಿಮ್ಮ ನೆಚ್ಚಿನ ಪತ್ನಿ ಬರೆದಿದ್ದಲ್ಲ'' ಎಂದೂ ಆಕೆ ಬರೆದಿದ್ದಾರೆ.

ತಮ್ಮ ತಂದೆಯ ನಿಧನಾನಂತರ ಆ ಕವನ ಬರೆದಿದ್ದಾಗಿ ಹಾಗೂ ನವೆಂಬರ್ 21ರಂದು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ನಂತರ ಮುಖ್ಯಮಂತ್ರಿ ಪತ್ನಿ ಸಾಧನಾ ಸಿಂಗ್ ವಾಟ್ಸ್ಯಾಪ್ ಗ್ರೂಪ್ ಒಂದರಲ್ಲಿ ಅದನ್ನು ಶೇರ್ ಮಾಡಿದ್ದಾರೆಂದು ತಿಳಿಯಿತು. ಅದಕ್ಕೆ ಸ್ಮೈಲಿ ಮೂಲಕ ಉತ್ತರ ನೀಡಿದ್ದಾಗಿ, ಆದರೆ ನಂತರ ಮುಖ್ಯಮಂತ್ರಿಯೇ ಆ ಕವನ ಶೇರ್ ಮಾಡಿ ಅದು ತಮ್ಮ ಪತ್ನಿ ಬರೆದಿದ್ದು ಎಂದು ಹೇಳಿದ ನಂತರ  ಆಕ್ಷೇಪಿಸಿದ್ದಾಗಿ ಭೂಮಿಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News