ಮುಂಬೈ ಕಚೇರಿ ನೆಲಸಮ ಕುರಿತು ಸುಪ್ರೀಂಕೋರ್ಟ್‌ಗೆ ಕಂಗನಾ ಅರ್ಜಿ

Update: 2020-12-02 09:45 GMT

ಹೊಸದಿಲ್ಲಿ: ಕಳೆದ ವಾರ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ವಿರುದ್ಧ  ಬಾಂಬೆ ಹೈಕೋರ್ಟ್‌ನಲ್ಲಿ ಭಾರೀ ಜಯ ಸಾಧಿಸಿದ್ದ ನಟಿ ಕಂಗನಾ ರಣಾವತ್ ಇಂದು ಮುಂಬೈನಲ್ಲಿರುವ ತನ್ನ ಕಚೇರಿಯನ್ನು ನೆಲಸಮಗೊಳಿಸಿರುವ ಕುರಿತಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವಾರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಂದು ವೇಳೆ ಬಿಎಂಸಿ(ಬೃಹನ್ಮುಂಬಯಿ ಮಹಾನಗರ ಪಾಲಿಕೆ)ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದರೆ ನನ್ನ ಅರ್ಜಿಯನ್ನು ಆಲಿಸದೆ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು ಎಂದು 33ರ ಹರೆಯದ ನಟಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಶುಕ್ರವಾರ ನೀಡಿದ ತೀರ್ಪಿನಲ್ಲಿ ಬಾಂಬೆ ಹೈಕೋರ್ಟ್ ಮುಂಬೈನ ಪಾಲಿ ಹಿಲ್‌ನಲ್ಲಿರುವ ರಣಾವತ್ ಕಚೇರಿಯನ್ನು ನೆಲಸಮಗೊಳಿಸುವ ಬಿಎಂಸಿ ನೋಟಿಸ್‌ನ್ನು ರದ್ದುಪಡಿಸಿತ್ತು. ಇದು ದುರದ್ದೇಶಪೂರಿತ ಕ್ರಮವಲ್ಲದೆ ಬೇರೆನಲ್ಲ. ಕಚೇರಿ ನೆಲಸಮದಿಂದ ಕಂಗನಾರಿಗೆ ಆಗಿರುವ ನಷ್ಟವನ್ನು ಭರಿಸುವಂತೆಯೂ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು.

ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಬಿಎಂಸಿ ಸೆಪ್ಟಂಬರ್ 9 ರಂದು ಕಂಗನಾ ಕಚೇರಿಯ ಒಂದು ಭಾಗವನ್ನು ನೆಲಸಮಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News