ಡ್ರಗ್ಸ್ ಪ್ರಕರಣ: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನು

Update: 2020-12-02 14:55 GMT

ಮುಂಬೈ,ಡಿ.2: ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಮಾದಕ ದ್ರವ್ಯ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಯ ಸೋದರ ಶೋವಿಕ್ ಚಕ್ರವರ್ತಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಮೂರು ತಿಂಗಳ ಬಳಿಕ ಬುಧವಾರ ಜಾಮೀನು ಮಂಜೂರು ಮಾಡಿದೆ.

ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ದ ಅಧಿಕಾರಿಯ ಎದುರಿನಲ್ಲಿ ನೀಡಲಾದ ತಪ್ಪೊಪ್ಪಿಗೆಗಳು ಅಥವಾ ಹೇಳಿಕೆಗಳನ್ನು ಸಾಕ್ಷ್ಯಾಧಾರವನ್ನಾಗಿ ಪರಿಗಣಿಸುವಂತಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ತನ್ನ ಜಾಮೀನು ಆದೇಶದಲ್ಲಿ ಉಲ್ಲೇಖಿಸಿದೆ.ಬಾಂಬೆ ಉಚ್ಚ ನ್ಯಾಯಾಲಯವು ಕಳೆದ ಅಕ್ಟೋಬರ್ ನಲ್ಲಿ ಶೋವಿಕ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು. ಆದರೆ ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ರಿಯಾ ರಾಜಪೂತ್‌ಗಾಗಿ ಮಾದಕ ದ್ರವ್ಯವನ್ನು ಖರೀದಿಸುತ್ತಿದ್ದರು ಮತ್ತು ಮಾದಕ ದ್ರವ್ಯ ಮಾಫಿಯಾದ ಸಕ್ರಿಯ ಸದಸ್ಯೆಯಾಗಿದ್ದಾರೆ ಎಂದು ಎನ್‌ ಸಿಬಿ ಆರೋಪಿಸಿತ್ತು.

ಶೋವಿಕ್‌ನನ್ನು ಸೆ.4ರಂದು ಬಂಧಿಸಲಾಗಿತ್ತು. ರಜಪೂತ್ ನಿಕಟವರ್ತಿಗಳೊಡನೆ ನಂಟು ಹೊಂದಿದ್ದರೆನ್ನಲಾದ ಅಬ್ಬಾಸ್ ಲಖಾನಿ ಮತ್ತು ಕರಣ್ ಅರೋರಾ ಅವರ ಬಳಿ ಯಿಂದ 59 ಗ್ರಾಂ. ಮರಿಜುವಾನಾ ವಶಪಡಿಸಿಕೊಂಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ. ನಾಲ್ಕು ದಿನಗಳ ಬಳಿಕ ರಿಯಾರನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಪೆಡ್ಲರ್‌ಗಳಾದ ಝೈದ್ ವಿಲತ್ರಾ ಮತ್ತು ಅಬ್ದುಲ್ ಬಾಸಿತ್ ಪರಿಹಾರ್ ಎನ್ನುವವರನ್ನೂ ಬಂಧಿಸಿದ್ದ ಎನ್‌ಸಿಬಿ, ಶೋವಿಕ್ ನಿರ್ದೇಶನದ ಮೇರೆಗೆ ಮಾದಕ ದ್ರವ್ಯ ಖರೀದಿಸಿದ್ದ ರಜಪೂತ್ ನಿವಾಸದ ಮ್ಯಾನೇಜರ್ ಮಿರಾಂಡಾ ಪರಿಹಾರ್‌ಗೆ ಪರಿಚಿತನಾಗಿದ್ದ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News