ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದಿದ್ದ 102 ಮಂದಿ ಕೋವಿಡ್‍ಗೆ ಬಲಿ

Update: 2020-12-03 10:23 GMT

ಭೋಪಾಲ್ : ಕೋವಿಡ್-19  ಸಾಂಕ್ರಾಮಿಕವು 1984ರ ಭೋಪಾಲ್ ಅನಿಲ ದುರಂತದ 102 ಮಂದಿ ಸಂತ್ರಸ್ತರನ್ನು ಬಲಿ ಪಡೆದುಕೊಂಡಿದೆ ಎಂದು ಮಧ್ಯ ಪ್ರದೇಶ ಸರಕಾರ ಮಾಹಿತಿ ನೀಡಿದೆ. ಆದರೆ  ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದಿದ್ದವರ ಪೈಕಿ 254 ಮಂದಿ  ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೆಲ ಎನ್‍ಜಿಒಗಳು ಹೇಳಿಕೊಂಡಿವೆ. ಡಿಸೆಂಬರ್ 2ರಂದು ಭೋಪಾಲ್ ಅನಿಲ ದುರಂತದ 36ನೇ ವರ್ಷಾಚರಣೆ ಸಂದರ್ಭ ಈ ಮಾಹಿತಿ ಹೊರಬಿದ್ದಿದೆ.

``ಡಿಸೆಂಬರ್ 2ರ ತನಕ ಭೋಪಾಲ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 518 ಮಂದಿ ಬಲಿಯಾಗಿದ್ದಾರೆ. ಅವರ ಪೈಕಿ 102 ಮಂದಿ ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದವರು. ಇವರ ಪೈಕಿ 69 ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದರೆ ಉಳಿದ 33 ಮಂದಿ 50 ವರ್ಷಕ್ಕಿಂತ ಕಿರಿಯರಾಗಿದ್ದಾರೆ,'' ಎಂದು ಭೋಪಾಲ್  ಅನಿಲ ದುರಂತ ಪರಿಹಾರ ಮತ್ತು ಪನರ್ವಸತಿ ಘಟಕದ ನಿರ್ದೇಶಕ ಬಸಂತ್ ಕುರ್ರೆ ಹೇಳಿದ್ದಾರೆ.

ಆದರೆ ಭೋಪಾಲ್ ಗ್ರೂಪ್ ಫಾರ್ ಇನ್ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್ ಎಂಬ ಎನ್‍ಜಿಒಗೆ ಸೇರಿದ ರಚನಾ ಢಿಂಗ್ರ ಎಂಬವರ ಪ್ರಕಾರ ಅವರ ಸಂಘಟನೆ  ಭೋಪಾಲದಲ್ಲಿ ಕೋವಿಡ್ ಸೋಂಕಿಗೆ ಮೃತಪಟ್ಟ 518 ಮಂದಿಯ ಪೈಕಿ 450 ಮಂದಿಯ ಮನೆಗೆ ಭೇಟಿ ನೀಡಿತ್ತು, ಈ 450 ಮಂದಿಯ ಪೈಕಿ 254 ಮಂದಿ ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದವರಾಗಿದ್ದರು ಎಂದಿದ್ದಾರೆ.

``ಭೋಪಾಲ್ ಅನಿಲ ದುರಂತ ಸಂತ್ರಸ್ತರ ಚಿಕಿತ್ಸೆಗೆಂದು ಭೋಪಾಲ್ ಮೆಮೋರಿಯಲ್ ಹಾಸ್ಪಿಟಲ್ ಆ್ಯಂಡ್  ರಿಸರ್ಚ್ ಸೆಂಟರ್ ಒದಗಿಸಿದ್ದ ಸ್ಮಾರ್ಟ್ ಕಾರ್ಡ್ ಈ 254 ಮಂದಿಯ ಬಳಿಯಿತ್ತು. ಅನಿಲ ದುರಂತ ಸಂತ್ರಸ್ತರಿಗೆ ನೀಡಲಾದ ಪರಿಹಾರ ಆದೇಶದ ಪ್ರತಿಗಳೂ ಅವರ ಬಳಿಯಿದ್ದವು'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News