ಮಾಸ್ಕ್ ನಿಯಮ ಉಲ್ಲಂಘಿಸಿದರೆ ಕೋವಿಡ್ ವಾರ್ಡ್ ನಲ್ಲಿ ಸೇವೆ ಸಲ್ಲಿಸಬೇಕೆಂಬ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Update: 2020-12-03 14:41 GMT

ಹೊಸದಿಲ್ಲಿ,ಡಿ.3: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದವರು ಇತರ ನಾಗರಿಕರ ಮೂಲಭೂತ ಹಕ್ಕುಗಳನ್ನು(ಜೀವನ ಮತ್ತು ಆರೋಗ್ಯ ಹಕ್ಕು) ಉಲ್ಲಂಘಿಸುತ್ತಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿತು. ಗುಜರಾತ್ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಸೇವೆ ಕರ್ತವ್ಯವನ್ನು ಕಡ್ಡಾಯಗೊಳಿಸಿ ಡಿ.2ರಂದು ಹೊರಡಿಸಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡಿದ ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠವು,ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಕೋವಿಡ್ ಶಿಷ್ಟಾಚಾರದ ಕಡ್ಡಾಯ ಪಾಲನೆಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತು.

 ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಮಾಸ್ಕ್ ಧಾರಣೆ ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಕೇಂದ್ರವು ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯವು ದೃಢಸಂಕಲ್ಪದೊಂದಿಗೆ ಜಾರಿಗೊಳಿಸಬೇಕು ಎಂದು ಹೇಳಿದ ಪೀಠವು, ರಾಜ್ಯದಲ್ಲಿ ಸಾವಿರಾರು ಜನರು ಸಮಾವೇಶಗೊಳ್ಳುತ್ತಿದ್ದಾರೆ ಮತ್ತು ಇಂತಹ ಸಮಾವೇಶಗಳನ್ನು ವರದಿ ಮಾಡಲು ಯಾವುದೇ ವ್ಯವಸ್ಥೆಯಿಲ್ಲ ಎಂದು ಬೆಟ್ಟು ಮಾಡಿತು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ ಅದು,ಉಲ್ಲಂಘಕರ ವಿರುದ್ಧ ದಂಡ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿತು.

 ಗುಜರಾತ್ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸಿದರು. ಆದೇಶವು ಒಳ್ಳೆಯ ಉದ್ದೇಶವನ್ನು ಹೊಂದಿದೆಯಾದರೂ ಅದರ ಜಾರಿಯ ಪರಿಣಾಮಗಳು ಕೆಟ್ಟದಾಗಿರಲಿವೆ ಎಂದು ವಾದಿಸಿದರು. ರಾಜ್ಯದ ಪೊಲೀಸರು ಮಾಸ್ಕ್ ಧರಿಸದವರಿಗೆ 1,000 ರೂ.ದಂಡ ವಿಧಿಸುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವು ಜನರನ್ನು ಕೋವಿಡ್ ಸೋಂಕಿಗೆ ಗುರಿಯಾಗುವ ಅಪಾಯಕ್ಕೆ ಒಡ್ಡುವ ಮೂಲಕ ಅವರಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ ಎಂದು ಗುಜರಾತ್ ಸರಕಾರವು ತನ್ನ ಮೇಲ್ಮನವಿಯಲ್ಲಿ ವಾದಿಸಿತ್ತು.

 ನ್ಯಾಯವಾದಿ ವಿಶಾಲ್ ಅಟ್ವಾನಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಗುಜರಾತ್ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು. ರಾಜ್ಯಾದ್ಯಂತ ಕೋವಿಡ್ ಕಡ್ಡಾಯ ನಿಯಮಗಳನ್ನು ಅನುಷ್ಠಾನಿಸುವುದರಲ್ಲಿ ಕೊರತೆಯಿದೆ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News