ರೈತರ ಸಮಸ್ಯೆ ಪರಿಹರಿಸಿ: ಕೇಂದ್ರ ಸರಕಾರಕ್ಕೆ ಅಧೀರ್ ರಂಜನ್ ಚೌಧುರಿ ಆಗ್ರಹ

Update: 2020-12-03 14:15 GMT

ಕೋಲ್ಕತ್ತಾ, ಡಿ. 3: ನೂತನ ಕೃಷಿ ಕಾಯ್ದೆ ವಿರುದ್ಧ ದಿಲ್ಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ‘ಬಳಸಿ ಬಿಸಾಡುವ ನೀತಿ’ ಅನುಸರಿಸುವ ಬದಲು ಅವರ ಸಮಸ್ಯೆ ಪರಿಹರಿಸುವಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಗುರುವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ದಿಲ್ಲಿಯತ್ತ ಸಾಗುವ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶಕ್ಕೆ ಆಹಾರ ನೀಡುವ ರೈತರಿಗೆ ಘನತೆ, ಗೌರವ ನೀಡಬೇಕಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿರುವ ಚೌಧುರಿ ಹೇಳಿದರು. ದಿಲ್ಲಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಕೂಲ ಹವಾಮಾನದಿಂದ ಬಳಲುತ್ತಿದ್ದಾರೆ ಎಂದು ಚೌಧುರಿ ಟ್ವೀಟ್ ಮಾಡಿದ್ದಾರೆ. ‘‘ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ನಾನು ಕೇಂದ್ರ ಸರಕಾರದಲ್ಲಿ ಮನವಿ ಮಾಡುತ್ತೇನೆ.

ರೈತರ ವಿರುದ್ಧ ಬಳಸಿ ಬಿಸಾಡುವ ನೀತಿ ಅನುಸರಿಸದಿರಿ ಎಂದು ಅವರು ಹೇಳಿದ್ದಾರೆ. ನಾಲ್ಕನೇ ಸುತ್ತಿನ ಮಾತುಕತೆಗಾಗಿ ನಾಲ್ವರು ಕೇಂದ್ರ ಸಚಿವರನ್ನು ರೈತ ಸಂಘದ ಪ್ರತಿನಿಧಿಗಳು ಭೇಟಿಯಾದ ಬಳಿಕ ಅಧೀರ್ ರಂಜನ್ ಚೌಧುರಿ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News