ಶಿಕ್ಷೆಗೊಳಗಾದ ಜನಪ್ರತಿನಿಧಿ ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರುವುದು ಅಸಾಧ್ಯ : ಕೇಂದ್ರ ಸರ್ಕಾರ

Update: 2020-12-04 03:46 GMT

ಹೊಸದಿಲ್ಲಿ : ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳಿಗೆ ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರುವುದು ಅಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಶಿಕ್ಷೆಗೆ ಒಳಗಾದ ರಾಜಕಾರಣಿಗಳನ್ನು ಕೂಡಾ ಶಿಕ್ಷೆಗೆ ಒಳಗಾದ ಉನ್ನತ ಅಧಿಕಾರಿಗಳಂತೆ ಸಮಾನವಾಗಿ ಪರಿಗಣಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದೆ. ಶಿಕ್ಷೆಗೆ ಒಳಗಾದ ಅಧಿಕಾರಿಗಳು ಮತ್ತೆ ಸರ್ಕಾರಿ ಸೇವೆಗೆ ಸೇರದಂತೆ ಅಜೀವ ನಿಷೇಧ ಹೇರಲಾಗುತ್ತಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಅಪರಾಧ ಎಸಗಿ ಶಿಕ್ಷೆಗೆ ಒಳಗಾದ ಅಧಿಕಾರಿಗಳು ಮತ್ತು ಸಂಸದರು/ಶಾಸಕರ ನಡುವೆ ವ್ಯತ್ಯಾಸವಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಸಲ್ಲಿಸಿದ ಅಫಿಡವಿತ್‌ನಲ್ಲಿ ವಾದಿಸಲಾಗಿದೆ. ಸಾರ್ವಜನಿಕ ಸೇವಕರು ಸರ್ಕಾರ ನಿಗದಿಪಡಿಸಿದ ಸೇವಾ ಷರತ್ತುಗಳಿಗೆ ಬದ್ಧರಾಗಿರಬೇಕಾಗುತ್ತದೆ. ಆದರೆ ಜನಪ್ರತಿನಿಧಿಗಳಿಗೆ ಇಂಥ ಷರತ್ತುಗಳು ಇಲ್ಲ ಎಂದು ಹೇಳಿದೆ.

ಸಂಸದರು ಮತ್ತು ಶಾಸಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯವಾಗುತ್ತದೆ. ಇದರ ಅನ್ವಯ ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆ ಅನುಭವಿಸಿದ ಜನಪ್ರತಿನಿಧಿಗಳಿಗೆ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.

ವಕೀಲ ಹಾಗೂ ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ. ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳಿಗೆ ಜೀವಿತಾವಧಿ ನಿಷೇಧ ಹೇರಬೇಕು ಎಂದು ಉಪಾದ್ಯಾಯ, ಮೂಲ ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News