ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ರೈತರ ಒಕ್ಕೂಟ ಕರೆ

Update: 2020-12-04 15:03 GMT

ಹೊಸದಿಲ್ಲಿ, ಡಿ. 4: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಉದ್ದೇಶಿಸಿರುವ ರೈತರ ಒಕ್ಕೂಟ ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿದೆ.

ಸಿಂಘು ಗಡಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕರು, ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

 ಭಾರತ್ ಬಂದ್‌ನ ಭಾಗವಾಗಿ ನಾವು ದಿಲ್ಲಿಯ ಎಲ್ಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಿದ್ದೇವೆ. ದೇಶಾದ್ಯಂತದ ಎಲ್ಲ ಹೆದ್ದಾರಿ ಟೋಲ್ ಗೇಟ್‌ಗಳನ್ನು ಆಕ್ರಮಿಸಲಿದ್ದೇವೆ ಹಾಗೂ ಸರಕಾರ ಟೋಲ್ ಸಂಗ್ರಹಿಸದಂತೆ ತಡೆಯಲಿದ್ದೇವೆ ಎಂದು ರೈತರು ಹೇಳಿದ್ದಾರೆ.

ಕೇಂದ್ರ ಸರಕಾರದೊಂದಿಗಿನ ಮಾತುಕತೆ ಸಂದರ್ಭ ನಾವು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದೆವು. ಈ ಮೂರು ಕಾಯ್ದೆಗಳು ಕಾರ್ಪೊರೇಟ್ ಸಂಸ್ಥೆಗಳ ಕೃಪಾ ಭಿಕ್ಷೆಗೆ ದೂಡುತ್ತದೆ ಹಾಗೂ ರೈತರಿಗೆ ವಂಚನೆಯಿಂದ ರಕ್ಷಣೆ ನೀಡುವ ಕಾನೂನನ್ನು ತೆಗೆದು ಹಾಕುತ್ತದೆ ಎಂದು ರೈತರು ಹೇಳಿದ್ದಾರೆ. ಭಾರತ್ ಬಂದ್‌ನ ಭಾಗವಾಗಿ ಡಿಸೆಂಬರ್ 5ರಂದು ನಾವು ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಲಿದ್ದೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರೀಂದರ್ ಸಿಂಗ್ ಲೋಖೋವಾಲ್ ಹೇಳಿದ್ದಾರೆ. ‘‘ನಾವು ಈ ಪ್ರತಿಭಟನೆ ಮುಂದುವರಿಸಬೇಕಾದ ಅಗತ್ಯತೆ ಇದೆ. ಕೇಂದ್ರ ಸರಕಾರ ಈ ಕರಾಳ ಕಾಯ್ದೆಯನ್ನು ಹಿಂಪಡೆಯಬೇಕು’’ ಎಂದು ಅಖಿಲ ಭಾರತ ಕಿಸಾನ್ ಸಭಾದ ಹನ್ನಾನ್ ಮೊಲ್ಲಾಹ್ ಹೇಳಿದ್ದಾರೆ. ರೈತರು ತಮ್ಮ ಬೇಡಿಕೆಯ ಪಟ್ಟು ಬಿಡದೇ ಇದ್ದುದರಿಂದ ಗುರುವಾರ ಕೇಂದ್ರ ಸರಕಾರ ಹಾಗೂ ಸುಮಾರು 40 ರೈತರ ಒಕ್ಕೂಟಗಳ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರೈತರ ನಡುವೆ ಶನಿವಾರ ಐದನೇ ಸುತ್ತಿನ ಮಾತುಕತೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News