ಭೂಸೇನೆಗೆ ಉಪವರಿಷ್ಠ ನೇಮಕಕ್ಕೆ ಕೇಂದ್ರ ಸರಕಾರ ಅಸ್ತು

Update: 2020-12-04 15:32 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.4: ಭೂಸೇನೆಯ ಉಪ ವರಿಷ್ಠ (ಕಾರ್ಯತಂತ್ರ) ಎಂಬ ನೂತನ ಹುದ್ದೆಯನ್ನು ಸೃಷ್ಟಿಸಲು ಕೇಂದ್ರ ಸರಕಾರ ಸಮ್ಮತಿಸಿದೆ. ಸೇನಾ ಮುಖ್ಯ ಕಾರ್ಯಾಲಯದಲ್ಲಿ ಕೈಗೊಳ್ಳಲಾಗಿರುವ ಬೃಹತ್ ಸುಧಾರಣಾ ಕಾರ್ಯಕ್ರಮಗಳ ಭಾಗವಾಗಿ ರಚನೆಯಾಗಿರುವ ಈ ಹುದ್ದೆಯನ್ನು ಸೃಷ್ಟಿಸಲಾಗಿದೆ.

 ನೂತನ ಸೇನಾಪಡೆಯ ಉಪ ವರಿಷ್ಠ (ಕಾರ್ಯತಂತ್ರ) ರು ಸೇನಾ ಕಾರ್ಯಾಚರಣೆ ಹಾಗೂ ವ್ಯೂಹಾತ್ಮಕ ಯೋಜನೆಯ ಮೇಲ್ವಿಚಾರಣೆ ನಡೆಸುವ ಹೊಣೆಗಾರಿಕೆಯನ್ನು ಹೊಂದಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಡಿಸೆಂಬರ್ 2, ಗುರುವಾರದಂದು ಆದೇಶವೊಂದನ್ನು ಹೊರಡಿಸಿದೆ.

 ಭೂಸೇನೆಯಲ್ಲಿ ಈಗಾಗಲೇ ಇಬ್ಬರು ಉಪವರಿಷ್ಠರಿದ್ದು ಕಾರ್ಯತಂತ್ರ ನಿರ್ವಹಣೆಗಾಗಿ ಸೃಷ್ಟಿಯಾಗಿರುವ ಮೂರನೇ ಉಪವರಿಷ್ಠ ಹುದ್ದೆ ಇದಾಗಿದೆ. ಪ್ರಸಕ್ತ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಲೆ.ಜ. ಪರಮ್‌ಜಿತ್ ಸಿಂಗ್ ಅವರು ಈ ಹುದ್ದೆಗೆ ನೇಮಕಗೊಳ್ಳುವ ನಿರೀಕ್ಷೆಯಿದೆ.

  2018ರ ಜೂನ್‌ನಲ್ಲಿ ಸೇನಾ ಮುಖ್ಯ ಕಾರ್ಯಾಲಯದಿಂದ ನಡೆಸಲಾದ ನಾಲ್ಕು ಅಧ್ಯಯನ ವರದಿಗಳು, ಸೇನಾಪಡೆಯ ಉಪವರಿಷ್ಠ (ಕಾರ್ಯತಂತ್ರ) ಹುದ್ದೆಯ ಸೃಷ್ಟಿಗೆ ಶಿಫಾರಸು ಮಾಡಿದ್ದವು. ಸೇನೆಯ ಕಾರ್ಯನಿರ್ವಹಣೆ ಹಾಗೂ ಕಾರ್ಯಾ ಚರಣೆಯ ದಕ್ಷತೆಯ ಸುಧಾರಣೆ, ಬಜೆಟ್ ವೆಚ್ಚದ ಗರಿಷ್ಠ ಸದುಪಯೋಗ, ಸೇನೆಯ ಅಧುನೀಕರಣವನ್ನು ಸುಧಾರಿಸುವ ಉದ್ದೇಶದಿಂದ ಈ ಅಧ್ಯಯನಗಳನ್ನು ನಡೆಸಲಾಗಿತ್ತು.

ಭೂಸೇನೆಯ ಉಪವರಿಷ್ಠ (ಕಾರ್ಯತಂತ್ರ)ರು ಕಾರ್ಯಾಚರಣೆ,ಗ್ರಹಿಕೆ ಹಾಗೂ ಸಮರಕಲೆ ಮಾಹಿತಿ ಪೂರೈಕೆಯ ನೇತೃತ್ವ ವಹಿಸಲಿದ್ದಾರೆ. ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ ಹಾಗೂ ಸೇನಾ ಬೇಹುಗಾರಿಕೆಯ ಮಹಾನಿರ್ದೇಶಕರು, ನೂತನ ಭೂಸೇನಾ ಉಪವರಿಷ್ಠರಿಗೆ ತಮ್ಮ ವರದಿಗಳನ್ನು ಸಲ್ಲಿಸಲಿದೆ.

 ಸೇನೆಯಲ್ಲಿ ಗ್ರಹಿಕಾ ಯೋಜನೆ ಹಾಗೂ ಕಾರ್ಯತಂತ್ರ ಸಂವಹನ ಎಂಬ ಎರಡು ನೂತನ ಇಲಾಖೆಗಳು ಸ್ಥಾಪನೆಯಾಗಲಿದ್ದು, ಅವು ಕೂಡಾ ಭೂಸೇನೆಯ ಉಪವರಿಷ್ಠ (ಕಾರ್ಯತಂತ್ರ)ರ ಅಧೀನಕ್ಕೆ ಒಳಪಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News