ಹೈದರಾಬಾದ್ ಮಹಾನಗರ ಪಾಲಿಕೆ: ಮೇಯರ್ ಪಟ್ಟ ಉಳಿಸಿಕೊಳ್ಳುವತ್ತ ಟಿಆರ್ ಎಸ್ ಚಿತ್ತ

Update: 2020-12-05 06:25 GMT

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ( ಟಿ ಆರ್ ಎಸ್) ಡಿಸೆಂಬರ್ 1 ರಂದು ನಡೆದಿದ್ದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಜಿಎಚ್ ಎಂಸಿ)ಚುನಾವಣೆಯಲ್ಲಿ 55 ಸೀಟುಗಳನ್ನು ಗೆದ್ದುಕೊಂಡು ದೊಡ್ಡ ಪಕ್ಷವಾಗಿದ್ದರೂ ಬಹುಮತ ಕೊರತೆಯನ್ನು ಎದುರಿಸುತ್ತಿದೆ.

150 ಸದಸ್ಯರನ್ನು ಒಳಗೊಂಡ ಜಿಎಚ್ ಎಂಸಿಯಲ್ಲಿ ಟಿಆರ್ ಎಸ್ 55 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಹುಮತಕ್ಕೆ 21 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಟಿಆರ್ ಎಸ್ ಒಟ್ಟು 99 ಸೀಟುಗಳಲ್ಲಿ ಜಯ ಸಾಧಿಸಿ  ಸ್ಪಷ್ಟ ಬಹುಮತ ಪಡೆದಿತ್ತು.

ಈ ಬಾರಿ ಟಿ ಆರ್ ಎಸ್ ಪ್ರದರ್ಶನ ನಿರೀಕ್ಷೆಗಿಂತ ಕಡಿಮೆಯಾಗಿದೆ.

ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಇನ್ನೂ 25 ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದೆ. ಮತ ಗಟ್ಟೆ ಸಮೀಕ್ಷೆಯು ಟಿಆರ್ ಎಸ್ ಗೆಲ್ಲುತ್ತದೆ ಎಂದು ಹೇಳಿತ್ತು. ನಾವು 12-13 ಸೀಟುಗಳನ್ನು 200-300 ಮತಗಳಿಂದ ಸೋತಿದ್ದೆವು. ನಾವು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಹೆಚ್ಚೇನು ಬೇಸರವಾಗಿಲ್ಲ. ಮತ ಹಾಕಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ ಎಂದು ಟಿಆರ್ ಎಸ್ ಕಾರ್ಯಾಧ್ಯಕ್ಷ  ಕೆಟಿಆರ್  ಹೇಳಿದ್ದಾರೆ.

2016ರ ಚುನಾವಣೆಯಲ್ಲಿ ಕೇವಲ 4 ಸೀಟುಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಪ್ರಮುಖ ನಾಯಕರಾದ ಅಮಿತ್ ಶಾ, ಆದಿತ್ಯನಾಥ್ , ಜೆಪಿ ನಡ್ಡಾ ಅವರ ಬಿರುಸಿನ ಪ್ರಚಾರದ ನೆರವನಿಂದ ಒಟ್ಟು 48 ಸೀಟುಗಳನ್ನು ಗೆದ್ದುಕೊಂಡಿದೆ. ಎಐಎಂಐಎಂ ಗೆ ತೀವ್ರ ಪೈಪೋಟಿ ನೀಡಿ 2ನೇ ದೊಡ್ಡ ಪಕ್ಷವಾಗಿಹೊರ ಹೊಮ್ಮಿದೆ.

ಇದೇ ವೇಳೆ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಾಗಿದ್ದರೂ ಎಐಎಂಐಎಂ ಪಕ್ಷವು ಕಳೆದ ಬಾರಿಯಷ್ಟೇ ಸೀಟುಗಳನ್ನು ಗೆದ್ದುಕೊಂಡು ಗಮನ ಸೆಳೆದಿದೆ. 2016ರಲ್ಲಿ ಅಸದುದ್ದೀನ್ ಉವೈಸಿ ಪಕ್ಷವು 44 ಸೀಟುಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಅಷ್ಟೇ ಸೀಟು ಗೆಲ್ಲಲು ಸಮರ್ಥವಾಗಿದೆ.

ಕಾಂಗ್ರೆಸ್ ಕೇವಲ 2 ಸೀಟುಗಳನ್ನು ಗೆದ್ದುಕೊಂಡಿದ್ದು, ಒಂದು ವಾರ್ಡ್ ನ ಫಲಿತಾಂಶ ಬಾಕಿ ಉಳಿದಿದೆ.

ಟಿಆರ್ ಎಸ್ ಪಕ್ಷ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದುಕೊಂಡಿದ್ದರೂ ಎಐಎಂಐಎಂ ಪಕ್ಷದ ಬೆಂಬಲದೊಂದಿಗೆ ಮೇಯರ್ ಪಟ್ಟ ಉಳಿಸಿಕೊಳ್ಳಲು ಸಜ್ಜಾಗಿದೆ. ತೆಲಂಗಾಣದಲ್ಲಿ ಟಿಆರ್ ಎಸ್ ಹಾಗೂ ಎಐಎಂಐಎಂ ಮೈತ್ರಿ ಪಕ್ಷವಾಗಿದ್ದು ಚುನಾವಣಾ ಪ್ರಚಾರದಲ್ಲಿ ಬಿಜೆಪಿಯನ್ನು ವಿರೋಧಿಸುತ್ತಾ ಬಂದಿವೆ.

ಮೇಯರ್ ಸ್ಥಾನವು ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ಈ ವರ್ಷದ ಜನವರಿಯಲ್ಲಿ ಮೇಯರ್ ಪಟ್ಟವನ್ನು ಮುಂದಿನ ಎರಡು ಅವಧಿಗೆ ಮಹಿಳಯರಿಗೆ ಮೀಸಲಿಟ್ಟಿದೆ.

ಹೈದರಾಬಾದ್ ಚುನಾವಣೆಯ ಕುರಿತು ಪ್ರಕ್ರಿಯಿಸಿದ ಅಸದುದ್ದೀನ್ ಉವೈಸಿ, "ನಾವು ಜಿಎಚ್ ಎಂಸಿ ಚುನಾವಣೆಯಲ್ಲಿ 44 ಸೀಟುಗಳನ್ನು ಗೆದ್ದಿದ್ದೇವೆ. ನೂತನವಾಗಿ ಚುನಾಯಿತ ಕಾರ್ಪೋರೇಟ್ ಗಳಲ್ಲಿ ನಾಳೆಯಿಂದಲೆ ಕೆಲಸ ಮಾಡುವಂತೆ ಹೇಳಿದ್ದೇನೆ. ನಾವು ಬಿಜೆಪಿಯೊಂದಿಗೆ ಪ್ರಜಾಪ್ರಭುತ್ವ ಮಾರ್ಗದಲ್ಲಿ ಹೋರಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ತನ್ನ ಹೆಜ್ಜೆಯನ್ನು ವಿಸ್ತರಿಸುವುದಕ್ಕೆ ತೆಲಂಗಾಣದ ಜನತೆ ತಡೆ ಹೇರಲಿದ್ದಾರೆ ಎಂಬ ವಿಶ್ವಾಸ ನಮಗಿದೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News