ಗುಂಡಿಕ್ಕಿ ಯುವಕನ ಹತ್ಯೆ; ಸಿಸಿಟಿವಿ ದೃಶ್ಯ ವೈರಲ್
ಹೊಸದಿಲ್ಲಿ, ಡಿ.6: ಸ್ನೇಹಿತೆಯ ಜೊತೆ ಅಂಗಡಿಗೆ ತೆರಳಿದ್ದ 25 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ದಿಲ್ಲಿ ಹೊರವಲಯದ ರೋಹಿಣಿ ನಗರದಲ್ಲಿ ನಡೆದಿದೆ.
ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು ರವಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಭರತ್ ಸೋಳಂಕಿ ಅಲಿಯಾಸ್ ಯುವಿನ್ ಎಂಬಾತ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ. . ಈತನ ವಿರುದ್ಧ ಅಪಹರಣ, ದರೋಡೆ ಸಹಿತ ಹಲವು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ಹೇಳಿವೆ.
ಶುಕ್ರವಾರ ಸಂಜೆ ರೋಹಿಣಿ ಸೆಕ್ಟರ್-24ರ ದಿನಸಿ ಅಂಗಡಿಗೆ ತನ್ನ ಸ್ನೇಹಿತೆಯೊಂದಿಗೆ ಆಗಮಿಸಿದ್ದ ಸೋಳಂಕಿ, ಖರೀದಿಸಿದ್ದ ವಸ್ತುಗಳನ್ನು ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿಡಲು ಹೊರಬಂದ ಸಂದರ್ಭ ಕಾದು ನಿಂತಿದ್ದ ದುಷ್ಕರ್ಮಿಯೊಬ್ಬ ಸಮೀಪದಿಂದಲೇ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿದ ಸೋಳಂಕಿ ಕೆಳಗೆ ಬಿದ್ದಾಗ ಮತ್ತೊಬ್ಬ ಸೋಳಂಕಿ ತಲೆಗೆ ನಾಲ್ಕೈದು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಅಂಗಡಿಯೊಳಗಿದ್ದ ಆತನ ಸ್ನೇಹಿತೆ ಸೋಳಂಕಿಯ ರಕ್ಷಣೆಗಾಗಿ ಧಾವಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆಕೆ ದುಷ್ಕರ್ಮಿಗಳನ್ನು ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ತೀವ್ರ ಗಾಯಗೊಂಡ ಸೋಳಂಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆಗೆ ಕ್ಲೀನ್‌ಚಿಟ್ ನೀಡಿಲ್ಲ. ಆಕೆಯನ್ನೂ ಪ್ರಶ್ನಿಸಲಾಗುತ್ತಿದೆ. ಸಿಸಿಟಿವಿ ದೃಶ್ಯದ ಆಧಾರದಲ್ಲಿ ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಉಪಾಯುಕ್ತ (ರೋಹಿಣಿ ವಿಭಾಗ) ಪ್ರಮೋದ್ ಕುಮಾರ್ ಮಿಶ್ರಾ ಹೇಳಿದ್ದಾರೆ.