ರೈತರ ಪರ ಪ್ರತಿಭಟನೆ ನಡೆಸಿದ ಅಖಿಲೇಶ್ ಯಾದವ್ ಪೊಲೀಸ್ ವಶಕ್ಕೆ
ಲಕ್ನೋ, ಡಿ. 6: ನೂತನ ಕೃಷಿ ಕಾಯ್ದೆಗಳ ವಿರುದ್ಧ ಧರಣಿ ನಡೆಸಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡರು.
ಕನ್ನೌಜ್ ರ್ಯಾಲಿ ನಡೆಯುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಕಚೇರಿ ಸಮೀಪದ ರಸ್ತೆಯನ್ನು ಉತ್ತರಪ್ರದೇಶ ಪೊಲೀಸರು ಮುಚ್ಚಿದ್ದರು. ಈ ಹಿನ್ನೆಲೆಯಲ್ಲಿ ಇಂದು ‘ಕಿಸಾನ್ ಯಾತ್ರೆ’ಯಲ್ಲಿ ಪಾಲ್ಗೊಳ್ಳಬೇಕಿದ್ದ ಅಖಿಲೇಶ್ ಯಾದವ್ ಲಕ್ನೋದಲ್ಲಿರುವ ತನ್ನ ನಿವಾಸದ ಹೊರಗೆ ಧರಣಿ ನಡೆಸಿದರು. ಲಕ್ನೋದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ತನ್ನ ನಿವಾಸದ ಸಮೀಪ ಇರಿಸಲಾಗಿದ್ದ ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಖಿಲೇಶ್ ಯಾದವ್, ಅವರ ಬೆಂಬಲಿಗರು ಮುರಿದು ಎಸೆದರು ಹಾಗೂ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಡೆಸಿದರು.
‘‘ಒಂದು ವೇಳೆ ನೂತನ ಕೃಷಿ ಕಾಯ್ದೆ ರೈತರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದ್ದರೆ, ರೈತರು ಯಾಕೆ ಸಮರದ ದಾರಿ ಹಿಡಿದಿದ್ದಾರೆ ? ಸರಕಾರ ಏಕೆ ತನ್ನ ನಿಲುವು ಬದಲಾಯಿಸುತ್ತಿಲ್ಲ ? ಒಂದು ವೇಳೆ ರೈತರಿಗೆ ಹೊಸ ಕಾನೂನು ಬೇಡವೆಂದಾದರೆ, ಸರಕಾರ ಅದನ್ನು ಹಿಂಪಡೆಯಬೇಕು’’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಯಾದವ್ ಅವರು 13 ಕಿಲೋಮೀಟರ್ ‘ಕಿಸಾನ್ ಯಾತ್ರೆ’ಯಲ್ಲಿ ಪಾಲ್ಗೊಳ್ಳಬೇಕಿತ್ತು. ಪಕ್ಷದ ಕಚೇರಿಗೆ ತೆರಳುವ ರಸ್ತೆಯನ್ನು ಮುಚ್ಚಿರುವುದು ಪ್ರಜಾಪ್ರಭುತ್ವ ವಿರೋಧಿ. ಕಿಸಾನ್ ಯಾತ್ರೆಯಲ್ಲಿ ಯಾದವ್ ಅವರು ಪಾಲ್ಗೊಳ್ಳುತ್ತಾರೆ ಎಂಬ ಭೀತಿ ಕೇಂದ್ರ ಸರಕಾರಕ್ಕಿದೆ. ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬ ವ್ಯಕ್ತಿಯ ಸಂವಿಧಾನಬದ್ದ ಹಕ್ಕು. ಅದನ್ನು ಉಲ್ಲಂಘಿಸುವಲ್ಲಿ ಕೇಂದ್ರ ಸರಕಾರ ನಿರತವಾಗಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೇಂದ್ರ ಚೌಧರಿ ಹೇಳಿದ್ದಾರೆ.