ಆರೋಗ್ಯ ಸೇತು ಕುರಿತು 'ಬೇಜವಾಬ್ದಾರಿಯುತ ವಿವರ'ಗಳನ್ನು ನೀಡಿದ್ದಕ್ಕೆ 'ಬೇಷರತ್ ಕ್ಷಮೆ'ಯಾಚಿಸಿದ ಕೇಂದ್ರ

Update: 2020-12-08 08:22 GMT

ಹೊಸದಿಲ್ಲಿ: ಆರೋಗ್ಯ ಸೇತು ಆ್ಯಪ್ ಕುರಿತ ಲಭ್ಯ ಮಾಹಿತಿ ಬಗ್ಗೆ "ಬೇಜವಾಬ್ದಾರಿಯುತ ವಿವರಗಳನ್ನು'' ನೀಡಿದ್ದಕ್ಕಾಗಿ ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಹಾಗೂ ಸಚಿವಾಲಯಗಳ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪರವಾಗಿ ಕೇಂದ್ರ ಮಾಹಿತಿ ಆಯೋಗಕ್ಕೆ 'ಬೇಷರತ್ ಕ್ಷಮೆ' ಸಲ್ಲಿಸಲಾಗಿರುವ ಕುರಿತು 'thewire.in' ವರದಿ ಮಾಡಿದೆ.

ಆರೋಗ್ಯ ಸೇತು ಆ್ಯಪ್ ಮೂಲದ ಕುರಿತಂತೆ ತನಗೆ ಮಾಹಿತಿಯಿಲ್ಲ ಎಂದು ಮೊದಲು ಹೇಳಿದ್ದ ಹಾಗೂ ನಂತರ ಎಲ್ಲಾ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿದೆ ಎಂದು ಹೇಳಿದ್ದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೇಂದ್ರ ಮಾಹಿತಿ ಆಯೋಗ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.

ಆರ್ ಟಿ ಐ ಕಾರ್ಯಕರ್ತ ಸೌರವ್ ದಲ್ ಅವರು ಆಗಸ್ಟ್ 1ರಂದು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿ ತನಗೆ ಆ್ಯಪ್ ಕುರಿತಂತೆ ಸಚಿವಾಲಯದಿಂದ ಸಮಾಧಾನಕರ ಉತ್ತರ ದೊರಕಿಲ್ಲ ಎಂದು ಹೇಳಿದ್ದರಲ್ಲದೆ, ಆರೋಗ್ಯ ಸೇತು ಆ್ಯಪ್ ರಚನೆ ಕುರಿತಾದ ಸಂಪೂರ್ಣ ಮಾಹಿತಿ, ಕಂಪೆನಿಗಳ ವಿವರಗಳು ಹಾಗೂ ಆ್ಯಪ್ ರಚನೆಯಲ್ಲಿ ಪಾಲ್ಗೊಂಡಿದ್ದ ಜನರು ಹಾಗೂ ಸರಕಾರಿ ಇಲಾಖೆಗಳ ಮಾಹಿತಿ ಕೇಳಿದ್ದರಲ್ಲದೆ ಯಾವ ಕಾನೂನಿನಡಿ ಈ ಆ್ಯಪ್ ರಚಿಸಲಾಗಿತ್ತು ಎಂದೂ ವಿವರ ಕೇಳಿದ್ದರು.

ಇದೊಂದು ಖಾಸಗಿತನದ ಹಕ್ಕಿನ ಕುರಿತಾದ ವಿಚಾರವಾಗಿರುವುದರಿಂದ ಈ ಪ್ರಕರಣದ ವಿಚಾರಣೆ ಆದಷ್ಟು ಬೇಗ ನಡೆಯಬೇಕೆಂದು ಕೇಂದ್ರ ಮಾಹಿತಿ ಆಯೋಗ ಹೇಳಿತ್ತಲ್ಲದೆ ಈ ಆ್ಯಪ್‍ನ ಡೆವಲೆಪರ್ ಆಗಿನ ನ್ಯಾಷನಲ್ ಇನ್ಫಾಮ್ರ್ಯಾಟಿಕ್ಸ್ ಸೆಂಟರ್ ಆಗಿದ್ದರೂ ಆ್ಯಪ್ ಕುರಿತು ತನ್ನಲ್ಲಿ ಮಾಹಿತಿಯಿಲ್ಲ ಎಂದು ಅದರು ಹೇಳಿದ್ದು ಬಹಳಷ್ಟು ಅಚ್ಚರಿ ಎಂದು ಮುಖ್ಯ ಮಾಹಿತಿ ಆಯುಕ್ತೆ ವನಜಾ ಎನ್ ಶರ್ಮ ಹೇಳಿದ್ದರು.

ತಮ್ಮಲ್ಲಿ ಮಾಹಿತಿಯಿಲ್ಲ ಎಂದು ಎನ್‍ಐಸಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹೇಳಿರುವ ಹಿನ್ನೆಲೆಯಲ್ಲಿ gov.in ಎಂಬ ಡೊಮೇನ್ ಹೆಸರಿನಲ್ಲಿ ವೆಬ್ ಸೈಟ್ ಹೇಗೆ ರಚನೆಯಾಯಿತು ಎಂದು ಕೇಂದ್ರ ಮಾಹಿತಿ ಆಯೋಗ ಪ್ರಶ್ನಿಸಿತ್ತು.

ನವೆಂಬರ್ 24ರಂದು ನಡೆದ ವಿಚಾರಣೆ ವೇಳೆ ರಾಷ್ಟ್ರೀಯ ಇ-ಗವರ್ನೆನ್ಸ್ ವಿಭಾಗದ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಶಿಲೋಮ ರಾವ್ ಎಲ್ಲಾ  ಮಾಹಿತಿ ಅಧಿಕಾರಿಗಳ ಪರವಾಗಿ "ಆಯೋಗದ ಮುಂದೆ ಬೇಜವಾಬ್ದಾರಿಯುತ ವಿವರಗಳನ್ನು'' ನೀಡಿದ್ದಕ್ಕಾಗಿ 'ಬೇಷರತ್ ಕ್ಷಮೆ' ಕೋರಿದರಲ್ಲದೆ ಇಂತಹ ಒಂದು ಪ್ರಮುಖ ವಿಚಾರದ ಆರ್ ಟಿ ಐ ಅರ್ಜಿಯನ್ನು ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಸೂಕ್ತವಾಗಿ ನಿಭಾಯಿಸಿಲ್ಲ ಎಂದು ಹೇಳಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News