ಎಪ್ರಿಲ್‌ನಿಂದ ಹೊಸ ವೇತನ ಕಾಯ್ದೆ ಜಾರಿಗೆ: ಕಡಿಮೆಯಾಗಲಿದೆ ‘ಟೇಕ್ ಹೋಂ ಸ್ಯಾಲರಿ’
ಹೊಸದಿಲ್ಲಿ, ಡಿ.9: ಸರಕಾರದ ನೂತನ ವೇತನ ಕಾಯ್ದೆಗೆ ಅನುಗುಣವಾಗಿ ಸಂಸ್ಥೆಗಳು ವೇತನ ಪ್ಯಾಕೇಜ್‌ಗಳನ್ನು ಪುನರ್‌ರಚಿಸಲಿರುವ ಹಿನ್ನೆಲೆಯಲ್ಲಿ ಮುಂದಿನ ಆರ್ಥಿಕ ವರ್ಷದಿಂದ (ಎಪ್ರಿಲ್‌ನಿಂದ) ನೌಕರರಿಗೆ ತೆರಿಗೆ, ಪಿಎಫ್ ಇತ್ಯಾದಿ ಕಡಿತದ ಬಳಿಕ ಕೈಗೆ ಸಿಗುವ ವೇತನ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಕೋಡ್ ಆನ್ ವೇಜಸ್ 2019ರ ಭಾಗವಾಗಿರುವ ಹೊಸ ನಿಯಮಗಳು ಎಪ್ರಿಲ್‌ನಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಹೊಸ ನಿಯಮದ ಪ್ರಕಾರ, ಭತ್ತೆ ಅಂಶಗಳು ಒಟ್ಟು ವೇತನದ 50 ಶೇ. ಮೀರಿರಬಾರದು. ಅಂದರೆ ಮೂಲ ವೇತನ ಒಟ್ಟು ವೇತನದ 50 ಶೇ. ದಷ್ಟು ಇರಬೇಕು. ಈ ನಿಯಮದ ಪ್ರಕಾರ ಉದ್ಯೋಗದಾತರು ನೌಕರರ ಮೂಲ ವೇತನ ಅಂಶವನ್ನು ಹೆಚ್ಚಿಸಬೇಕು. ಇದರಿಂದ ನೌಕರರ ವೇತನದಿಂದ ಗ್ರಾಚ್ಯುವಿಟಿ ಮತ್ತು ಪಿಎಫ್ ಖಾತೆಗೆ ಕಡಿತವಾಗುವ ಮೊತ್ತ ಹೆಚ್ಚುತ್ತದೆ.
ನೌಕರರ ವೇತನದಿಂದ ಪಿಎಫ್ ನಿವೃತ್ತಿ ಪಿಂಚಣಿ ವಿಭಾಗಕ್ಕೆ ಹಣ ಕಡಿತವಾಗುವುದರಿಂದ ಕೈಗೆ ಸಿಗುವ ವೇತನ ಕಡಿಮೆಯಾಗುತ್ತದೆ. ಆದರೆ ನೌಕರರ ನಿವೃತ್ತಿ ಮೂಲಧನ ಹೆಚ್ಚಲಿದೆ. ಈಗ ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ನೌಕರರ ಮೂಲ ವೇತನವನ್ನು 50 ಶೇ. ಕ್ಕಿಂತ ಕಡಿಮೆ ನಿಗದಿ ಮಾಡಿ, ಭತ್ತೆಗಳ ವಿಭಾಗದಲ್ಲಿ ಅಧಿಕ ಮೊತ್ತ ಉಲ್ಲೇಖಿಸಲಾಗುತ್ತಿದೆ. ವೇತನದಿಂದ ಕಡಿತ ಮೂಲವೇತನಕ್ಕೆ ಮಾತ್ರ ಅನ್ವಯಿಸುವುದರಿಂದ ಮೂಲ ವೇತನ ಹೆಚ್ಚಿದರೆ ವೇತನದಿಂದ ಕಡಿತದ ಪ್ರಮಾಣವೂ ಹೆಚ್ಚುತ್ತದೆ. ಸಹಜವಾಗಿಯೇ, ನೌಕರರ ಕೈಗೆ ಸಿಗುವ ವೇತನದ ಪ್ರಮಾಣ ಕಡಿಮೆಯಾಗುತ್ತದೆ.
ಆದರೆ ಹೊಸ ಕಾಯ್ದೆಯ ಹಿನ್ನೆಲೆಯಲ್ಲಿ ನೌಕರರ ಕೈಗೆ ಸಿಗುವ ವೇತನದ ಪ್ರಮಾಣ ಕಡಿಮೆಯಾದರೂ, ಇದರಿಂದ ಸಾಮಾಜಿಕ ಭದ್ರತೆ ಮತ್ತು ನಿವೃತ್ತಿ ಸವಲತ್ತು ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.