ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಇಟ್ಟಿಗೆ, ಕಲ್ಲಿನಿಂದ ದಾಳಿ

Update: 2020-12-10 14:30 GMT

ಕೋಲ್ಕತಾ, ಡಿ.10: ಬಿಜೆಪಿ ಅಧ್ಯಕ್ಷ ಜಗತ್‌ಪ್ರಕಾಶ್ ನಡ್ಡಾರ ಬೆಂಗಾವಲು ವಾಹನಗಳ ಮೇಲೆ ಗುರುವಾರ ಕೋಲ್ಕತಾದಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಪಶ್ಚಿಮ ಬಂಗಾಳಕ್ಕೆ ಎರಡು ದಿನದ ಭೇಟಿಯಲ್ಲಿರುವ ನಡ್ಡಾ, ಇತರ ನಾಯಕರೊಂದಿಗೆ ಕೋಲ್ಕತಾದ ಡೈಮಂಡ್ ಬಂದರ್‌ಗೆ ತೆರಳುತ್ತಿದ್ದ ಸಂದರ್ಭ ಕಲ್ಲು ಮತ್ತು ಇಟ್ಟಿಗೆಗಳನ್ನು ಕಾರಿನತ್ತ ತೂರಲಾಗಿದೆ. ಸಹೋದ್ಯೋಗಿಗಳಾದ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯ್‌ವರ್ಗಿಯರಿಗೆ ಗಾಯವಾಗಿದೆ. ತಾನು ಬುಲೆಟ್‌ಪ್ರೂಫ್ ಕಾರಿನಲ್ಲಿದ್ದರಿಂದ ಅಪಾಯವಿಲ್ಲದೆ ಪಾರಾಗಿದ್ದೇನೆ ಎಂದು ನಡ್ಡಾ ಹೇಳಿರುವುದಾಗಿ ವರದಿ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಈಗ ಇರುವ ಅರಾಜಕತೆಯ ಮತ್ತು ಅಸಹಿಷ್ಣುತೆ ಪರಿಸ್ಥಿತಿ ಅಂತ್ಯವಾಗಬೇಕಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನವಾಗಿದೆ. ತೃಣಮೂಲ ಪಕ್ಷದ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆಡಳಿತಯಂತ್ರ ಸಂಪೂರ್ಣ ಕುಸಿದಿದ್ದು ರಾಜ್ಯದಲ್ಲಿ ಈಗ ಗೂಂಡಾರಾಜ್ಯವಿದೆ ಎಂದು ನಡ್ಡಾ ಹೇಳಿದ್ದಾರೆ. ಕಲ್ಲೇಟಿನಿಂದ ತನ್ನ ಕಾರಿಗೆ ಹಾನಿಯಾಗಿರುವ ವೀಡಿಯೊವನ್ನು ಹಂಚಿಕೊಂಡಿರುವ ವಿಜಯ್‌ವರ್ಗಿಯ, ನಡ್ಡಾ ಕಾರ್ಯಕ್ರಮದ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಪೊಲೀಸರು ತಮ್ಮ ಅಸಮರ್ಥತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಬಿಜೆಪಿ ಅಧ್ಯಕ್ಷರಿಗೆ ಭದ್ರತೆ ಒದಗಿಸುವಲ್ಲಿ ಪಶ್ಚಿಮ ಬಂಗಾಳ ಸರಕಾರ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಡ್ಡಾರ ಭೇಟಿ ಸಂದರ್ಭ ಭದ್ರತಾ ವ್ಯವಸ್ಥೆಯಲ್ಲಿ ಆಗಿರುವ ಲೋಪದ ಬಗ್ಗೆ ವಿವರಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವುದಾಗಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ದೊಣ್ಣೆ ಮತ್ತು ಕಲ್ಲು ಹಿಡಿದುಕೊಂಡಿದ್ದ 200ಕ್ಕೂ ಹೆಚ್ಚು ಜನರಿದ್ದ ಗುಂಪು ಕೋಲ್ಕತಾದ ಬಿಜೆಪಿ ಕಚೇರಿಯೆದುರು ಗುಂಪುಗೂಡಿದ್ದರು. ಕೆಲವರು ಕಚೇರಿ ಹೊರಗಡೆ ನಿಲ್ಲಿಸಿರುವ ಕಾರಿನ ಮೇಲೇರಿ ಘೋಷಣೆ ಕೂಗುತ್ತಿದ್ದರಲ್ಲದೆ ನಡ್ಡಾ ಕುಳಿತಿದ್ದ ಕಾರಿನತ್ತ ನುಗ್ಗುತ್ತಿದ್ದರು. ಅಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಮುಂದಾಗಲಿಲ್ಲ. ಮುನ್ನುಗ್ಗಿ ಬಂದ ಕೆಲವರು ಅಲ್ಲಿದ್ದ ವಾಹನಗಳತ್ತ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗುರುವಾರ ಬೆಳಿಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದರೂ ಇಂತಹ ಘಟನೆ ನಡೆದಿರುವುದು ಕಳವಳಕಾರಿಯಾಗಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News