ದಿಲ್ಲಿ ಹಿಂಸಾಚಾರಕ್ಕೆ ಅಮಿತ್ ಶಾ ಹೊಣೆ: ಸಿಪಿಎಂ ಸತ್ಯಶೋಧನಾ ವರದಿ

Update: 2020-12-10 17:01 GMT

ಹೊಸದಿಲ್ಲಿ,ಡಿ.10: ಸಿಪಿಎಂ ಬಿಡುಗಡೆಗೊಳಿಸಿರುವ ಸತ್ಯಶೋಧನಾ ವರದಿಯೊಂದು ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಹೊಣೆಯಾಗಿಸಿದೆ. ಹಿಂಸಾಚಾರದಲ್ಲಿ 40 ಮುಸ್ಲಿಮರು ಮತ್ತು 13 ಹಿಂದುಗಳು ಸೇರಿದಂತೆ 53 ಜನರು ಬಲಿಯಾಗಿದ್ದರು.

‘ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ,ಫೆಬ್ರವರಿ 2020’ಶೀರ್ಷಿಕೆಯ ವರದಿಯು,ಹಿಂಸಾಚಾರ ಹೆಚ್ಚುವಲ್ಲಿ ಅಮಿತ್ ಶಾ ಅವರ ಗೃಹ ಸಚಿವಾಲಯವು ಪ್ರಮುಖ ಪಾತ್ರವನ್ನು ವಹಿಸಿತ್ತು ಎಂದು ಹೇಳಿದೆ.

ಈವರೆಗೆ ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಹಲವಾರು ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿರುವ ಪೊಲೀಸರು,ಆರೋಪಿಗಳ ಒಳಸಂಚಿನ ಫಲವಾಗಿ ದಂಗೆಗಳು ಸಂಭವಿಸಿದ್ದವು ಎಂದು ಹೇಳಿಕೊಂಡಿದ್ದಾರೆ. ಫೆಬ್ರವರಿ ದಂಗೆಗಳ ಕುರಿತು ಪೂರಕ ಆರೋಪಪಟ್ಟಿಯೊಂದರ ಸಾಕ್ಷಿ ಹೇಳಿಕೆ ಭಾಗದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದಕ್ಕಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಹೆಸರು ಸಹ ಕಾಣಿಸಿಕೊಂಡಿದೆ. ಆದರೆ ಅವರನ್ನು ಆರೋಪಿಯನ್ನಾಗಿ ಹೆಸರಿಸಿಲ್ಲ.

ಸಿಪಿಎಂ ಈ ಹಿಂದೆ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ಶಾಂತಿಯುತ ರಾಜಕೀಯ ಪ್ರತಿಭಟನೆಗಳ ಅಪರಾಧೀಕರಣವನ್ನು ಖಂಡಿಸಿತ್ತು.

ಕೋಮು ಹಿಂಸಾಚಾರವನ್ನು ದಿಲ್ಲಿ ದಂಗೆಗಳು ಎಂದು ಬಣ್ಣಿಸುವುದು ಸರಿಯಲ್ಲ. ದಂಗೆಗಳು ಎರಡೂ ಪಕ್ಷಗಳು ಸಮಾನವಾಗಿ ಭಾಗಿಯಾಗಿರುವ ಸ್ಥಿತಿಯನ್ನು ಬಣ್ಣಿಸುತ್ತವೆ. ಆದರೆ ಫೆಬ್ರವರಿ ಘಟನಾವಳಿಗಳಲ್ಲಿ ಹಿಂದುತ್ವ ಗುಂಪುಗಳು ಆಕ್ರಮಣವನ್ನು ನಡೆಸಿದ್ದವು ಮತ್ತು ಇನ್ನೊಂದು ಸಮುದಾಯವು ಈ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹತಾಶ ಪ್ರಯತ್ನಗಳನ್ನು ಮಾಡಿತ್ತು. ಹೆಚ್ಚಿನೆಲ್ಲ ಪ್ರದೇಶಗಳಲ್ಲಿ ಪೊಲೀಸರು ಹಿಂದುತ್ವ ಗುಂಪುಗಳನ್ನು ಬೆಂಬಲಿಸಿದ್ದ ವೀಡಿಯೊ ಸಾಕ್ಷಾಧಾರಗಳಿವೆ ಎಂದು ಬುಧವಾರ ಬಿಡುಗಡೆಗೊಂಡಿರುವ ವರದಿಯು ಹೇಳಿದೆ.

 ಪೊಲೀಸರ ಹೇಳಿಕೆಗಳಿಗೆ ವಿರುದ್ಧವಾದ ಹಲವಾರು ನಿರ್ದಿಷ್ಟ ಹಿಂಸಾಚಾರದ ಘಟನೆಗಳನ್ನು ಪಟ್ಟಿ ಮಾಡಿರುವ ವರದಿಯು ಒಂದೇ ರೀತಿಯ ಹಲವಾರು ಎಫ್‌ಐಆರ್‌ಗಳು,ಪೊಲೀಸರು ಉಲ್ಲೇಖಿಸಿರುವ ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ಚಿತ್ರಹಿಂಸೆಯ ದೂರುಗಳನ್ನು ಪ್ರಮುಖವಾಗಿ ಬಿಂಬಿಸಿದೆ.

ಫೆಬ್ರವರಿ 24ರಂದು ಹಿಂಸಾಚಾರ ಭುಗಿಲೆದ್ದಾಗ ಕರ್ಫ್ಯೂವನ್ನು ಏಕೆ ಹೇರಿರಲಿಲ್ಲ ಮತ್ತು ಸೇನೆಯನ್ನೇಕೆ ನಿಯೋಜಿಸಿರಲಿಲ್ಲ ಎಂದು ಪ್ರಶ್ನಿಸಿರುವ ವರದಿಯು,ಫೆ.23ರಿಂದ 27ರವರೆಗಿನ ಅವಧಿಯಲ್ಲಿ ದಿಲ್ಲಿ ಪೊಲೀಸರು ಮತ್ತು ಕ್ಷಿಪ್ರ ಕ್ರಿಯಾಪಡೆ ಸಿಬ್ಬಂದಿಗಳನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು ಎಂದು ಬೆಟ್ಟು ಮಾಡಿದೆ.

 ದೇಶದ್ರೋಹಿಗಳಿಗೆ ಗುಂಡಿಕ್ಕುವಂತೆ ಕರೆ ನೀಡಿದ್ದ ಅಥವಾ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಅತ್ಯಾಚಾರ ಮತ್ತು ಕೊಲೆಗಳನ್ನು ನಡೆಸಲು ಹಿಂದುಗಳ ಮನೆಗೆ ನುಗ್ಗಲಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ನಾಯಕರ ದ್ವೇಷಭಾಷಣಗಳನ್ನು ಗೃಹಸಚಿವರು ಉಪೇಕ್ಷಿಸಿದ್ದರು ಎಂದು ಆರೋಪಿಸಿರುವ ವರದಿಯು,ಗೃಹಸಚಿವರು ತನಿಖೆಯು ನಡೆಯುವ ಮೊದಲೇ ತನಿಖಾ ವರದಿಯನ್ನು ಮಾ.11ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ನಂತರ ತನಿಖೆಯು ಶಾ ಅವರ ವರದಿಯನ್ನು ಸಮರ್ಥಿಸುವ ನಿಟ್ಟಿನಲ್ಲಿ ಮಾತ್ರ ನಡೆದಿತ್ತು. ಬಳಿಕ ಶಾ ಅವರು ಕಾಂಗ್ರೆಸ್ ನಾಯಕರು 2019,ಡಿ.14ರಂದು ರ್ಯಾಲಿಯಲ್ಲಿ ದಂಗೆಗಳನ್ನು ಪ್ರಚೋದಿಸಿ ದ್ವೇಷಭಾಷಣಗಳನ್ನು ಮಾಡಿದ್ದರುಎಂದು ಬಣ್ಣಿಸಿದ್ದರು. ಇದರೊಂದಿಗೆ ನಿಜಕ್ಕೂ ಪ್ರತಿಪಕ್ಷವು ದಂಗೆಗಳನ್ನು ಪ್ರಚೋದಿಸಿತ್ತು ಎಂದು ಸಾಧಿಸಲು ಅವರು ಬಯಸಿದ್ದರು ಮತ್ತು ಮುಖ್ಯವಾಗಿ ಹಿಂಸೆಗೆ ಅಲ್ಪಸಂಖ್ಯಾತ ಸಮುದಾಯ ಕಾರಣವೆಂದು ದೂರಿದ್ದರು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News