‘‘ನಾವು ಅಪೀಲುದಾರ ಯಾರೆಂದು ನೋಡಿ ದಿನಾಂಕ ನಿಗದಿ ಪಡಿಸುವುದಿಲ್ಲ’’

Update: 2020-12-10 12:06 GMT

ಮುಂಬೈ : ಆರ್ಕಿಟೆಕ್ಟ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇತ್ತೀಚೆಗೆ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನದ ಬೆನ್ನಲ್ಲೇ ಅವರ ಜಾಮೀನು ಅಪೀಲನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಂಡು ಅವರಿಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಇಂದು ಬಾಂಬೆ ಹೈಕೋರ್ಟ್ ನ್ಯಾಯಾಧೀಶರು ಅರ್ನಬ್ ಅವರು ಆರೋಪಿಯಾಗಿರುವ ಟಿಆರ್ ಪಿ ಪ್ರಕರಣದ ವಿಚಾರಣೆ ವೇಳೆ ನೀಡಿದ ಹೇಳಿಕೆ ಗಮನ ಸೆಳೆದಿದೆ.

‘‘ಯಾರು ಅಪೀಲುದಾರ ಎಂಬುದನ್ನು ನೋಡಿ ಅಂತೆಯೇ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದು ನಮ್ಮ ಉದ್ದೇಶವಲ್ಲ,’’ ಎಂದು ವಿಚಾರಣೆ ವೇಳೆ ನ್ಯಾಯಾಧೀಶರುಗಳಾದ ಎಸ್ ಎಸ್ ಶಿಂಧೆ ಹಾಗೂ ಎಂ ಎಸ್ ಕಾರ್ಣಿಕ್ ಅವರ ಪೀಠ ಹೇಳಿತು.
ಟಿಆರ್ ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರು ದಾಖಲಿಸಿರುವ ಎಫ್ಐಆರ್ ವಿರುದ್ಧ ಅರ್ನಬ್ ಅಪೀಲಿನ ಕುರಿತು ಇಂದು ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭ ಅರ್ನಬ್ ವಕೀಲ ಅಬದ್ ಪೊಂಡ ಅವರು ವರ್ಚುವಲ್ ವಿಚಾರಣೆಗೆ ಮನವಿ ಮಾಡಿ ‘‘ನಾನು ಇಂದು ವಾದ ಮಂಡಿಸಲು ಖುಷಿ ಪಡುತ್ತಿದ್ದೆ ಆದರೆ ಹರೀಶ್ ಸಾಳ್ವೆ ಅವರು ಯುವರ್ ಲಾರ್ಡ್ ಶಿಪ್ ಗಳನ್ನು ನೋಡಲು ಕಾತರರಾಗಿದ್ದಾರೆ,’’ ಎಂದರು. ಆಗ ಪ್ರತಿಕ್ರಿಯಿಸಿದ ಜಸ್ಟಿಸ್ ಶಿಂಧೆ ಮೇಲಿನಂತೆ ಹೇಳಿದರಲ್ಲದೆ ನಮಗೆ ಎಲ್ಲಾ ಪ್ರಕರಣಗಳು ಸಮಾನ ಎಂದರು. ‘‘ಎಲ್ಲಾ ವಕೀಲರುಗಳು ಅವರಿಗೆ ಸಾಕಾಗುವ ತನಕ ವಾದ ಮಂಡಿಸಿದರೂ ನಾವು ಅವರನ್ನು ಆಲಿಸುತ್ತೇವೆ ಎಂಬ ಭರವಸೆ ನೀಡುತ್ತೇವೆ,’’ ಎಂದು ಜಸ್ಟಿಸ್ ಶಿಂಧೆ ಹೇಳಿದಾಗ ಎಲ್ಲರೂ ನಗೆಗಡಲಿನಲ್ಲಿ ತೇಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News