×
Ad

ದೇಶ ದ್ರೋಹ ಪ್ರಕರಣ: ಬಂಧಿತ ಪತ್ರಕರ್ತನಿಗೆ ಜಾಮೀನು ಮಂಜೂರು

Update: 2020-12-10 19:49 IST
ಕಿಶೋರಚಂದ್ರ ವಾಂಗ್‌ಖೆಮ್

ಹೊಸದಿಲ್ಲಿ,ಡಿ.10: ದೇಶದ್ರೋಹ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ಮಣಿಪುರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಇಂಫಾಲ್‌ನ ಪತ್ರಕರ್ತ ಕಿಶೋರಚಂದ್ರ ವಾಂಗ್‌ಖೆಮ್ ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

 2018ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ,ಆರೆಸ್ಸೆಸ್ ಮತ್ತು ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರನ್ನು ಟೀಕಿಸಿದಾಗಿನಿಂದ ಬಿಜೆಪಿ ನೇತೃತ್ವದ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ವಾಂಗ್‌ಖೆಮ್ ದೇಶದ್ರೋಹ ಆರೋಪದಲ್ಲಿ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಆಗಾಗ್ಗೆ ಜೈಲುವಾಸವನ್ನು ಅನುಭವಿಸುತ್ತಿದ್ದಾರೆ. 2019ರ ಎಪ್ರಿಲ್‌ನಲ್ಲಿ ಮಣಿಪುರ ಉಚ್ಚ ನ್ಯಾಯಾಲಯವು ಅವರ ವಿರುದ್ಧದ ಎಲ್ಲ ಆರೋಪಗಳನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆಗೊಳಿಸಿತ್ತು.

ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಮಹಿಳೆಯೋರ್ವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಕ್ಕಾಗಿ ದೇಶದ್ರೋಹದ ಆರೋಪದಲ್ಲಿ ವಾಂಗ್‌ಖೆಮ್ ಅವರನ್ನು ಸೆ.29ರಂದು ಪೊಲೀಸರು ಮತ್ತೆ ಬಂಧಿಸಿದ್ದರು. ಮಣಿಪುರದ ಪ್ರಭಾವಿ ಬಿಜೆಪಿ ರಾಜಕಾರಣಿಯೋರ್ವರ ಪತ್ನಿಯಾಗಿರುವ ಆ ಮಹಿಳೆ ರಾಜ್ಯದ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ತನ್ನ ಪತಿಗೆ ಆಪ್ತಳಾಗಿರುವ ಗಿರಿಜನೇತರ ಮೈತೀ ಸಮುದಾಯದ ಮಹಿಳೆಯು ತನ್ನ ವಿರುದ್ಧ ಮಾಡಿದ್ದ ಅವಮಾನಕಾರಿ ಟೀಕೆ ಮತ್ತು ಜನಾಂಗೀಯ ನಿಂದನೆಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದರು.

ಕೆಲವು ದಿನಗಳ ಬಳಿಕ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದ ಮಹಿಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ವಾಂಗ್‌ಖೆಮ್,ಮಾರನ್ ಸಮುದಾಯದ ರಾಜಕಾರಣಿಯ ‘ಮೊದಲ ಪತ್ನಿ’ಯ ವಿರುದ್ಧ ಬಹುಸಂಖ್ಯಾತ ಮೈತೀ ಸಮುದಾಯದ ಮಹಿಳೆಯು ಮಾಡಿರುವ ಟೀಕೆಗಳು ಮುಂದಿನ ಚುನಾವಣೆಗಳಲ್ಲಿ ಸದ್ರಿ ರಾಜಕಾರಣಿಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೇ ಎಂದು ಪ್ರಶ್ನಿಸಿದ್ದರು. ರಾಜಕಾರಣಿಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಬುಡಕಟ್ಟು ಮತಗಳಿರುವುದನ್ನು ಅವರು ಬೆಟ್ಟು ಮಾಡಿದ್ದರು.

ವಾಂಗ್‌ಖೆಮ್ ಬಂಧನದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರ ಪತ್ನಿ, ಗಿರಿಜನೇತರ ಮಹಿಳೆಯೋರ್ವಳು ಗಿರಿಜನ ಮಹಿಳೆಯ ವಿರುದ್ಧ ಮಾಡಿದ್ದ ಅವಮಾನಕಾರಿ ಟೀಕೆಯನ್ನು ಕಡೆಗಣಿಸಿರುವ ಪೊಲೀಸರು ತನ್ನ ಪತಿಯ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆಡಳಿತ ಪಕ್ಷವು ತನ್ನ ಪತಿಯ ವಿರುದ್ಧ ಸೇಡು ಸಾಧಿಸುತ್ತಿದೆ ಎಂದು ಆರೋಪಿಸಿದ್ದರು.

ವಾಂಗ್‌ಖೆಮ್ ಮಾರಮ್ ಬುಡಕಟ್ಟು ಜನಾಂಗದ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಮಾರಮ್ ಮಹಿಳಾ ಒಕ್ಕೂಟವು ನೀಡಿರುವ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News