×
Ad

ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

Update: 2020-12-10 19:53 IST

ಮುಂಬೈ, ಡಿ.10: ದೇವಸ್ಥಾನಕ್ಕೆ ಪ್ರವೇಶಿಸುವ ಭಕ್ತರು ಸುಸಂಸ್ಕೃತ ರೀತಿಯಲ್ಲಿ ಬಟ್ಟೆ ಧರಿಸಿರಬೇಕು ಎಂದು ಶಿರ್ಡಿ ಸಾಯಿಬಾಬ ದೇವಸ್ಥಾನದಲ್ಲಿ ಹಾಕಿರುವ ಫಲಕವನ್ನು ತೆಗೆಯುವ ಉದ್ದೇಶದಿಂದ ಶಿರ್ಡಿಯತ್ತ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ಸಂಘಟನೆಯ ಸದಸ್ಯರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಿವಾದಾತ್ಮಕ ವಿಷಯವನ್ನು ಒಳಗೊಂಡಿರುವ ಫಲಕವನ್ನು ತೆಗೆಯದಿದ್ದರೆ, ಡಿಸೆಂಬರ್ 10ರಂದು ತಾನು ಹಾಗೂ ಭೂಮಾತಾ ಬ್ರಿಗೇಡ್ ಸಂಘಟನೆಯ ಸದಸ್ಯರು ಶಿರ್ಡಿಗೆ ತೆರಳಿ ಫಲಕವನ್ನು ತೆಗೆಯುತ್ತೇವೆ ಎಂದು ತೃಪ್ತಿ ದೇಸಾಯಿ ಈ ಹಿಂದೆ ಎಚ್ಚರಿಸಿದ್ದರು. ಈ ಮಧ್ಯೆ, ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11ರ ಮಧ್ಯರಾತ್ರಿಯವರೆಗೆ ಶಿರ್ಡಿ ದೇವಸ್ಥಾನ ಪ್ರವೇಶಿಸದಂತೆ ತೃಪ್ತಿ ದೇಸಾಯಿಗೆ ಶಿರ್ಡಿ ಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ ಶಿಂಧೆ ನೋಟಿಸ್ ನೀಡಿದ್ದರು.

ಆದರೆ ನೋಟಿಸನ್ನು ಧಿಕ್ಕರಿಸಿದ್ದ ತೃಪ್ತಿ ದೇಸಾಯಿ ಹಾಗೂ ಭೂಮಾತಾ ಬ್ರಿಗೇಡ್‌ನ 20 ಸದಸ್ಯರು ಗುರುವಾರ ಬೆಳಿಗ್ಗೆ ಪುಣೆಯಿಂದ ಶಿರ್ಡಿಗೆ ಹೊರಟಿದ್ದರು. ಅವರನ್ನು ಪುಣೆ-ಅಹ್ಮದ್‌ನಗರ್ ಹೆದ್ದಾರಿಯ ಸೂಪ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ಶಿರ್ಡಿ ದೇವಸ್ಥಾನದ ಅಧಿಕಾರಿಗಳು, ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿಲ್ಲ. ನಾಮಫಲಕದ ಮೂಲಕ ಭಕ್ತರಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News