ವಲಸೆ ಕಾರ್ಮಿಕರ ದತ್ತಾಂಶ ಕೋಶ ರಚನೆಗೆ ಮುಂದಾದ ಕೇಂದ್ರ ಸರಕಾರ

Update: 2020-12-10 14:26 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ,ಡಿ.10: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಉಂಟಾಗಿದ್ದ ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿಯ ವಲಸೆ ಕಾರ್ಮಿಕರ ಕುರಿತು ಸಮಗ್ರ ಮಾಹಿತಿಗಳನ್ನು ಹೊಂದಿರದಿದ್ದಕ್ಕಾಗಿ ಟೀಕೆಗೊಳಗಾಗಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈಗ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ಕ್ಷೇತ್ರದಲ್ಲಿಯ ಇತರರಿಗಾಗಿ ನೂತನ ದತ್ತಾಂಶ ಕೋಶವೊಂದನ್ನು ರೂಪಿಸಲು ಮುಂದಾಗಿದೆ. ಇದಕ್ಕಾಗಿ ವಿವಿಧ ಸಚಿವಾಲಯಗಳ ನೆರವನ್ನು ಅದು ಕೋರಿದೆ. ಈ ದತ್ತಾಂಶ ಕೋಶವು 2021ರ ಜೂನ್ ವೇಳೆಗೆ ಬಳಕೆಗೆ ಲಭ್ಯವಾಗಲಿದೆ.

 ಆರಂಭದಲ್ಲಿ ಈ ದತ್ತಾಂಶ ಕೋಶವು ನರೇಗಾ ಮತ್ತು ‘ಒಂದು ದೇಶ ಒಂದು ಪಡಿತರ ಚೀಟಿ’ಯಂತಹ ಹಾಲಿ ಯೋಜನೆಗಳು ಮತ್ತು ಇಎಸ್‌ಐಸಿ ಹಾಗೂ ಇಪಿಎಫ್‌ಒಗಳಲ್ಲಿ ಲಭ್ಯ ಮಾಹಿತಿಗಳನ್ನು ಒಳಗೊಂಡಿರಲಿದೆ. ಬಳಿಕ ಆಧಾರ್ ಮಾಹಿತಿಗಳನ್ನು ಬಳಸಿ ಈ ಕೋಶದಲ್ಲಿ ಪುನರಾವರ್ತನೆಗಳನ್ನು ನಿವಾರಿಸಲಾಗುವುದು. ಇದರ ನಂತರ ಹೊಸ ಪೋರ್ಟಲ್‌ನಲ್ಲಿ ನೋಂದಾವಣೆಗೆ ಅವಕಾಶ ಕಲ್ಪಿಸಲಾಗುವುದು. ವಲಸೆ ಕಾರ್ಮಿಕರು ಸ್ವತಃ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ)ವು ನೂತನ ಪೋರ್ಟಲ್ ಅನ್ನು ಅಭಿವೃದ್ಧಿಗೊಳಿಸುತ್ತಿದ್ದು, ಆರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನೂತನ ಪೋರ್ಟಲ್‌ಗಾಗಿ ಹಣಕಾಸನ್ನು ಲಭ್ಯವಾಗಿಸಲಾಗಿದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಅಸಂಘಟಿತ ಕ್ಷೇತ್ರಗಳ ಸುಮಾರು 20-25 ಕೋಟಿ ಕಾರ್ಮಿಕರು ಪೋರ್ಟಲ್‌ಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದ ಅವರು, ನರೇಗಾದಡಿ ಸುಮಾರು 8-10 ಕೋಟಿ ಕಾರ್ಮಿಕರು ನೋಂದಾಯಿತರಾಗಿದ್ದಾರೆ. ಇತರ ಕ್ಷೇತ್ರಗಳ ಸುಮಾರು 10-15 ಕೋಟಿ ಕಾರ್ಮಿಕರಿದ್ದಾರೆ. ‘ಒಂದು ದೇಶ ಒಂದು ಪಡಿತರ ಚೀಟಿ’ಯು ಬೃಹತ್ ದತ್ತಾಂಶ ಕೋಶವಾಗಿದೆ. ಆದರೆ ಹಲವಾರು ಹೆಸರುಗಳು ಇವೆರಡೂ ಯೋಜನೆಗಳಲ್ಲಿವೆ ಮತ್ತು ಪುನರಾವರ್ತನೆಗೊಂಡಿರುವ ಹೆಸರುಗಳನ್ನು ತೆಗೆದುಹಾಕಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News