ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ವರದಿ ಕೋರಿದ ರಾಷ್ಟ್ರೀಯ ಮಹಿಳಾ ಆಯೋಗ

Update: 2020-12-10 16:25 GMT

ಹೊಸದಿಲ್ಲಿ, ಡಿ. 10: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಮಹಿಳೆಯೋರ್ವರ ಮೇಲೆ 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಪ್ರಕರಣದ ತನಿಖೆಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶಿಸಿದೆ.

ದಂಪತಿ ಮಂಗಳವಾರ ರಾತ್ರಿ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ 17 ಮಂದಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು ಹಾಗೂ ಅವರ ಪತಿಯನ್ನು ಒತ್ತೆಸೆರೆ ಇರಿಸಿಕೊಂಡಿದ್ದರು ಎಂದು ವರದಿಯಾಗಿತ್ತು. ಆರೋಪಿಗಳು ಕುಡಿದಿದ್ದರು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದರು. ‘‘ಈ ಘಟನೆ ತೀವ್ರ ಕಳವಳಕಾರಿಯಾದುದು.

ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು’’ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘‘ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಎರಡು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಲು ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಅನುಸರಣೆ ಕೋರಿ ಜಾರ್ಖಂಡ್‌ನ ಡಿಜಿಪಿಗೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಪತ್ರ ಬರೆದಿದ್ದಾರೆ’’ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಪ್ರಕರಣದ ಕುರಿತು ಪೊಲೀಸರು ತೆಗೆದುಕೊಂಡು ಕ್ರಮಗಳ ಬಗ್ಗೆ ವಿಸ್ತೃತ ವರದಿ ಕೋರಲಾಗಿದೆ ಎಂದು ಕೂಡ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News