ಸಿಸೋಡಿಯಾ ನಿವಾಸದ ಮೇಲೆ ಬಿಜೆಪಿ ದಾಳಿ: ಆಪ್ ಆರೋಪ

Update: 2020-12-10 17:17 GMT

ಹೊಸದಿಲ್ಲಿ,ಡಿ.10: ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಬಿಜೆಪಿಯ ಗೂಂಡಾಗಳು ದಾಳಿ ನಡೆಸಿದ್ದಾರೆಂದು ಆಮ್ ಆದ್ಮಿ ಪಕ್ಷ ಗುರುವಾರ ಆಪಾದಿಸಿದೆ. ಸಿಸೋಡಿಯಾ ಹಾಗೂ ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸುವ ಪೊಲೀಸ್ ಸಿಬ್ಬಂದಿಯ ಬೆಂಬಲದಿಂದಲೇ ಬಿಜೆಪಿ ಗೂಂಡಾಗಳು ದುಷ್ಕೃತ್ಯವೆಸಗಿದ್ದಾರೆಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ಸುಮಾರು 12 ಮಂದಿಯ ಗುಂಪೊಂದು ದಿಲ್ಲಿ ಉಪಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಧಾವಿಸಿ ಬಂದು, ಅಲ್ಲಿ ಕೈಬೆರಳೆಣಿಕೆಯಷ್ಟಿದ್ದ ಪೊಲೀಸರ ಎದುರಿನಲ್ಲೇ ಹಾದು ಹೋಗುತ್ತಿರುವ ದೃಶ್ಯಗಳ ವೀಡಿಯೊಗಳನ್ನು ಸಿಸೋಡಿಯಾ ಹಾಗೂ ಎಎಪಿ ಮುಖಂಡರಾದ ಅತಿಷಿ ಮತ್ತು ರಾಘವ್ ಚಡ್ಡಾ ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದ್ಜಾರೆ. ಗುಂಪಿನಲ್ಲಿದ್ದ ಒಬ್ಬಾತನ ಬಳಿ ಆಸಾಲ್ಟ್ ರೈಫಲ್‌ನಂತೆ ಕಾಣುವ ಸಾಧನವಿದ್ದುದು ವೀಡಿಯೊದಲ್ಲಿ ಗೋಚರಿಸಿದೆ.

ಘಟನೆ ನಡೆದ ವೇಳೆ ಸಿಸೋಡಿಯಾ ಅವರು ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿದ ಅವರು , ‘‘ ಇಂದು ನನ್ನ ಅನುಪಸ್ಥಿತಿಯಲ್ಲಿ ಬಿಜೆಪಿಯ ಗೂಂಡಾಗಳು ನನ್ನ ಮನೆಗೆ ನುಗ್ಗಿದ್ದಾರೆ ಹಾಗೂ ನನ್ನ ಪತ್ನಿ ಹಾಗೂ ಮಕ್ಕಳ ಮೇಲೆ ದಾಳಿಗೆ ಯತ್ನಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಸಿಸೋಡಿಯಾ ಅವರು ತನ್ನ ಟ್ವೀಟ್‌ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಟ್ಯಾಗ್ ಮಾಡಿದ್ದು, ‘‘ ನೀವು ರಾಜಕೀಯ ಸಮರದಲ್ಲಿ ಸೋತಿರಬಹುದು. ಆದರೆ ಅದಕ್ಕಾಗಿ ನೀವು ಪ್ರತಿಕ್ರಿಯಿಸುವ ರೀತಿ ಹೀಗೆಯಾ?’’ ಎಂದು ಹೇಳಿದ್ದಾರೆ.

    ದಾಳಿ ಘಟನೆಯ ಬಗ್ಗೆ ದಿಲ್ಲಿ ಪೊಲೀಸರು ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ದಿಲ್ಲಿ ಬಿಜೆಪಿಯ ಯುವಘಟಕವು ಹೇಳಿಕೆಯೊಂದನ್ನು ನೀಡಿ, ಬಿಜೆಪಿಯ ಮೇಯರ್‌ಗಳು ಹಾಗೂ ಇತರ ಕಾರ್ಪೊರೇಟ್ ನಾಯಕರನ್ನು ಹತ್ಯೆಗೈಯಲು ಆಮ್ ಆದ್ಮಿ ಪಕ್ಷವು ರೂಪಿಸಿರುವ ಸಂಚಿನ ವಿರುದ್ಧ ತಾವು ಇಂದು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆಯೆಂದು ಅದು ತಿಳಿಸಿದೆ.

ಯಾವುದೇ ರೀತಿಯ ಸವಾಲಿಗೆ ಉತ್ತರಿಸಲು ಬಿಜೆಪಿ ಕಾರ್ಯಕರ್ತರು ಸಮರ್ಥರೆಂಬುದನ್ನು ಸ್ಪಷ್ಟಪಡಿಸಲು ನಾವು ಸಿಸೋಡಿಯಾ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಿದ್ದೇವೆ ಎಂದು ದಿಲ್ಲಿ ಬಿಜೆಪಿಯ ಉಪಾಧ್ಯಕ್ಷ ಅಶೋಕ್ ಗೋಯೆಲ್ ದೇವರಾ ತಿಳಿಸಿದ್ದಾರೆ.

  ಸಿಸೋಡಿಯಾ ನಿವಾಸದ ಮೇಲೆ ಗೂಂಡಾಗಳ ದಾಳಿ ಘಟನೆಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಎಎಪಿ ನಾಯಕರು ಬಲವಾಗಿ ಖಂಡಿಸಿದ್ದಾರೆ. ರಾಜಕೀಯ ನಾಯಕರನ್ನು ಗುರಿಯಿಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಆತಂಕ ಕಾರಿಯಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News