ಕೋಮುದ್ವೇಷ ಹರಡಿದ ಆರೋಪ: ಇಬ್ಬರು ಮಣಿಪುರ ವಿದ್ಯಾರ್ಥಿ ನಾಯಕರ ಬಂಧನ

Update: 2020-12-11 18:29 GMT

ಇಂಫಾಲ (ಮಣಿಪುರ),ಡಿ.11: ಕೋಮು ದ್ವೇಷವನ್ನು ಹರಡುತ್ತಿದ್ದ ಆರೋಪದಲ್ಲಿ ಮಣಿಪುರ ವಿದ್ಯಾರ್ಥಿ ಸಂಘ ದಿಲ್ಲಿ (ಎಂಎಸ್‌ಎಡಿ)ಯ ಇಬ್ಬರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಎಂಎಸ್‌ಎಡಿಯ ಮಹಾ ಕಾರ್ಯದರ್ಶಿ ಸಿಂಘಜಿತ್ ಥಾಕ್ಚೊಮ್ ಮತ್ತು ಸಂಘಟನಾ ಕಾರ್ಯದರ್ಶಿ ಕೆನೆಡಿ ಮೊಯಿರಾಂಗ್ಥೆಮ್ ಅವರನ್ನು ಸೋಮವಾರ ದಿಲ್ಲಿ ಮತ್ತು ಮಣಿಪುರ ಪೊಲೀಸರ ಜಂಟಿ ತಂಡವು ದಿಲ್ಲಿಯ ಚಾಣಕ್ಯಪುರಿ ಪ್ರದೇಶದಿಂದ ಬಂಧಿಸಿದ್ದು,ವಿಚಾರಣೆಗಾಗಿ ಗುರುವಾರ ಇಲ್ಲಿಗೆ ಕರೆತರಲಾಗಿದೆ ಎಂದು ಇಂಫಾಲ ಪೂರ್ವ ಜಿಲ್ಲೆಯ ಎಸ್‌ಪಿ ಕೆ.ಮೇಘಚಂದ್ರ ಅವರು ತಿಳಿಸಿದರು.

ಕೋಮು ದ್ವೇಷ ಹರಡುವಿಕೆ ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ವಿದ್ಯಾರ್ಥಿ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಗುಂಪುಗಳು ನಿರ್ದಿಷ್ಟ ಸಮುದಾಯದ ವಿರುದ್ಧ ಅಸಭ್ಯ ಭಾಷೆಯನ್ನೂ ಬಳಸಿದ್ದರು ಎಂದರು.

ಆದರೆ,ಅಸಭ್ಯ ಭಾಷೆಯ ಬಳಕೆಯ ಬಗ್ಗೆ ವಿದ್ಯಾರ್ಥಿ ಸಂಘವು ವಿಷಾದವನ್ನು ವ್ಯಕ್ತಪಡಿಸಿದೆ ಎಂದು ಈಸ್ಟ್‌ಮೋಜೊ ಪತ್ರಿಕೆಯು ವರದಿ ಮಾಡಿದೆ.

ರಾಜ್ಯದ ಕೆಲವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತ ಕಲಿಕೆಯನ್ನು ಜಾರಿಗೆ ತರುವುದಾಗಿ ಮಣಿಪುರದ ಶಿಕ್ಷಣ ಸಚಿವ ಎಸ್.ರಾಜನ್ ಸಿಂಗ್ ಅವರು ಪ್ರಕಟಿಸಿದ ಬಳಿಕ ನ.20ರಂದು ಎಂಎಸ್‌ಎಡಿ ಹೇಳಿಕೆಯೊಂದನ್ನು ಹೊರಡಿಸಿತ್ತು. ಸಂಸ್ಕೃತ ಭಾಷೆಯ ಹೇರಿಕೆಯನ್ನು ಖಂಡಿಸಿದ್ದ ಅದು,ಇದು ಮಣಿಪುರದ ವಿರುದ್ಧ ವಸಾಹತುಶಾಹಿಯನ್ನು ವಿಸ್ತರಿಸುವ ಪ್ರಯತ್ನವಾಗಿದೆ ಎಂದು ಬಣ್ಣಿಸಿತ್ತು.

‘ಮೇಲ್ವರ್ಗದ ಹಿಂದು ಬ್ರಾಹ್ಮಣರು ಏನು ಎನ್ನುವುದು ನಮಗೆ ಗೊತ್ತಿದೆ. ಹೀಗಿರುವಾಗ ದ್ವೇಷ,ಅಪರಾಧ,ಲಿಂಗ ಭೇದಭಾವ,ಮತ್ತು ದುರಭಿಮಾನ ಇವುಗಳನ್ನು ಆಧರಿಸಿರುವ ಸಂಸ್ಕೃತವನ್ನು ಹೇರಲು ಪ್ರಯತ್ನಿಸುವ ಮೂಲಕ ಸರಕಾರವು ತನ್ನ ಮೂರ್ಖತನವನ್ನು ಬಯಲುಗೊಳಿಸಿದೆ’ ಎಂದು ಬಂಧಿತ ವಿದ್ಯಾರ್ಥಿ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದರು.

ಮಣಿಪುರ ಸರಕಾರವು ಆರೆಸ್ಸೆಸ್‌ನಿಂದ ಪ್ರಚೋದಿತವಾಗಿದೆ ಮತ್ತು ಸಂಸ್ಕೃತ ಭಾಷೆಯ ಹೇರಿಕೆಯು ಮಣಿಪುರದ ಜನರನ್ನು ಶೈಕ್ಷಣಿಕ ಮತ್ತು ಭಾಷಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ ಎಂದು ಹೇಳಿಕೆಯು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News