‘ಕನ್ನಡತಿ’ ಕಂಡ ಯಶಸ್ವಿ ನಿರ್ದೇಶಕ ಯಶವಂತ

Update: 2020-12-12 19:30 GMT

ಸ ದ್ಯದ ಮಟ್ಟಿಗೆ ಕನ್ನಡದ ಜನಪ್ರಿಯ ಟಿವಿ ಧಾರಾವಾಹಿ ಎಂದರೆ ಅದು ‘ಕನ್ನಡತಿ’. ಕಿರುತೆರೆ ಧಾರಾವಾಹಿಯೊಂದು ಪ್ರೀತಿ, ಪ್ರೇಮ, ಕೌಟುಂಬಿಕ ಸಮಸ್ಯೆಗಳಾಚೆಗೆ ಸದ್ದು ಮಾಡಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಇದು. ಮುಖ್ಯವಾಗಿ ಕನ್ನಡತಿ ಧಾರಾವಾಹಿಯಲ್ಲಿ ಹೆಸರಿಗೆ ತಕ್ಕಂತೆ ಕನ್ನಡ ಭಾಷೆಯ ಬಗ್ಗೆ ಕಾಳಜಿ ಮಾತ್ರವಲ್ಲ ಕನ್ನಡದ ಶಿಕ್ಷಣವನ್ನು ಕೂಡ ನೀಡಲಾಗುತ್ತಿರುವುದು ವಿಶೇಷ. ಬಹುಶಃ ಡಾ.ರಾಜ್‌ಕುಮಾರ್ ಅವರು ಇಂದು ಇದ್ದಿದ್ದರೆ ಖಂಡಿತವಾಗಿ ಈ ಧಾರಾವಾಹಿಯ ನಿರ್ದೇಶಕರನ್ನು ಮನೆಗೆ ಕರೆಸಿ ಅಭಿನಂದಿಸುತ್ತಿದ್ದರು ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ! ಅದೊಂದೇ ಮಾತು ಕನ್ನಡತಿಯ ಗುಣಮಟ್ಟ ಮತ್ತು ಜನಪ್ರಿಯತೆಗೆ ಸಾಕ್ಷಿ. ಅಂಥದೊಂದು ಧಾರಾವಾಹಿಗೆ ನಿರ್ದೇಶಕರಾಗಿಯೂ ಸದ್ದಿಲ್ಲದೆ ಕಾರ್ಯನಿರತರಾದವರು ಕಾಸರಗೋಡಿನ ಯುವಕ ಯಶವಂತ. ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿರುವ ಮಾತುಕತೆ ಇಲ್ಲಿದೆ.


ಪ್ರ: ‘ಕನ್ನಡತಿ’ಯ ಜನಪ್ರಿಯತೆ ನಿರೀಕ್ಷಿತವಾಗಿತ್ತೇ?
 ನಾನು ಒಂದು ಪ್ರಾಜೆಕ್ಟ್ ಒಪ್ಪಿಕೊಳ್ಳುವಾಗ ಅದು ಜನಪ್ರಿಯ ವಾಗಬೇಕು ಎನ್ನುವುದು ನನ್ನ ಮೊದಲ ಆಕಾಂಕ್ಷೆಯಾಗಿರುತ್ತದೆ. ಯಾಕೆಂದರೆ ನಾನು ಬಣ್ಣದ ಬದುಕನ್ನು ನನ್ನ ಆತ್ಮತೃಪ್ತಿಗಾಗಿ ಆರಿಸಿ ಬಂದಿದ್ದೇನೆಯೇ ಹೊರತು ಅನಿವಾರ್ಯತೆಯಿಂದ ಬಂದವನಲ್ಲ. ಆದರೆ ನನಗೆ ನಿರ್ದೇಶಕನಾಗಿ ಇದುವರೆಗೆ ಸಿಕ್ಕಿರುವ ಹೆಸರಿಗಿಂತ ಹೆಚ್ಚು ಗುರುತಿಸುವಿಕೆ ತಂದುಕೊಟ್ಟ ಧಾರಾವಾಹಿ ಇದು ಎನ್ನುವುದನ್ನು ಖಂಡಿತವಾಗಿ ಒಪ್ಪುತ್ತೇನೆ. ಹಾಗಾಗಿ ಧಾರಾವಾಹಿಯ ಜನಪ್ರಿಯತೆ ನಿರೀಕ್ಷೆಗಿಂತ ಹೆಚ್ಚಿನ ಖುಷಿ ನೀಡಿದೆ.

 ಪ್ರ: ನಿಮ್ಮ ಪ್ರಕಾರ ಈ ಯಶಸ್ಸಿಗೆ ಪ್ರಮುಖ ರೂವಾರಿ ಯಾರು?
 ಯಾವುದೇ ಯಶಸ್ಸಿಗೆ ಒಬ್ಬರನ್ನಷ್ಟೇ ಕಾರಣ ಎನ್ನಲು ಸಾಧ್ಯವಾಗದು. ಮೇಲ್ನೋಟಕ್ಕೆ ಯಾರೇ ಕಾಣಿಸಬಹುದು. ಆದರೆ ಅವರೇ ಕಾರಣ ಎಂದು ಹೇಳಿದರೆ ತಪ್ಪಾಗುತ್ತದೆ. ಯಾಕೆಂದರೆ ಒಂದು ಪ್ರಾಜೆಕ್ಟ್ ನೆರವೇರಬೇಕಾದರೆ ಅದರ ಪರಿಕಲ್ಪನೆ ಮೊದಲು ತಲೆಯೊಳಗೆ ತುಂಬಿಕೊಂಡವರು, ಅದರ ನಿರ್ಮಾಣಕ್ಕೆ ಬಂಡವಾಳ ಹಾಕುವವರು ಮತ್ತು ಪಡೆದ ಪಗಾರಕ್ಕೆ ನಿಷ್ಠೆಯಾಗಿ ದುಡಿಯುವ ಪ್ರತಿಯೊಬ್ಬ ಯೂನಿಟ್ ಕಾರ್ಮಿಕರ ತನಕ ಎಲ್ಲರೂ ಕಾರಣಕರ್ತರೇ ಎಂದು ಹೇಳಬಹುದು. ಇಂಥದೊಂದು ಕಾನ್ಸೆಪ್ಟ್ ಇರಿಸಿಕೊಂಡು ಕತೆ ಮಾಡಿದ ಕಲರ್ಸ್ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಅವರು, ಚಿತ್ರಕತೆ ಮಾಡಿದ ವಿಕಾಸ್ ನೇಗಿಲೋಣಿ, ಸಂಭಾಷಣೆ ಬರೆದ ಮಂಜುನಾಥ ಭಟ್, ಕಲಾವಿದರನ್ನು ಚೆನ್ನಾಗಿ ತೋರಿಸಿಕೊಡುವ ಛಾಯಾಗ್ರಾಹಕ ಯೋಗೇಶ್ ಮತ್ತು ನಿರ್ಮಾಪಕ ಮಿಲನ ಪ್ರಕಾಶ್ ಮೊದಲಾದವರನ್ನು ಈ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳಲೇಬೇಕು.

 ಪ್ರ: ಒಬ್ಬ ನಿರ್ದೇಶಕರಾಗಿ ನಿಮಗೆ ಚಾಲೆಂಜ್ ಅನಿಸುವುದೇನು?
  ಹಿಂದೆಲ್ಲ ಕಿರುತೆರೆ ಧಾರಾವಾಹಿಯ ಪ್ರತಿಕ್ರಿಯೆಗಳನ್ನು ತಿಳಿಯಬೇಕಾದರೆ ಅವರೊಂದಿಗೆ ನೇರ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿತ್ತು. ಇಂದು ಹಾಗಲ್ಲ ಮೊದಲ ಸಂಚಿಕೆ ಪ್ರಸಾರವಾಗುತ್ತಿದ್ದ ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಧಾರಾವಾಹಿಯ ಪ್ರೇಕ್ಷಕರ ಅನಿಸಿಕೆಗಳು ವ್ಯಕ್ತವಾಗತೊಡಗುತ್ತವೆ. ಸಂವಾದದಲ್ಲಿ ನೇರವಾಗಿ ಹಂಚಿಕೊಳ್ಳಲಾಗದಂತಹ ವಿಚಾರಗಳನ್ನು ಕೂಡ ಅವರು ಮುಖಕ್ಕೆ ಹೊಡೆದಂತೆ ವಿಮರ್ಶೆ ಮಾಡಬಲ್ಲರು. ಅವುಗಳ ಕಡೆಗೆ ಗಮನ ಹರಿಸಿದರೆ ಅಂಥ ಪ್ರೇಕ್ಷಕರ ಬೇಡಿಕೆಯನ್ನು ಹೇಗೆ ಈಡೇರಿಸಬಹುದು ಎನ್ನುವುದೇ ದೊಡ್ಡ ಚಾಲೆಂಜ್ ಆಗಬಹುದು. ಆದರೆ ನಾನು ಸದಾ ಸಾಮಾಜಿಕ ಜಾಲತಾಣದಿಂದ ದೂರದಲ್ಲೇ ಇರುತ್ತೇನೆ. ಮಾತ್ರವಲ್ಲ, ಆನ್‌ಲೈನ್‌ನಲ್ಲಿ ಕಾಣಿಸುವವರು ಮಾತ್ರವೇ ವೀಕ್ಷಕರು ಎಂದು ಪರಿಗಣಿಸಿಕೊಂಡಿಲ್ಲ. ಮರೆಯದೆ ಪ್ರತಿ ದಿನ ಧಾರಾವಾಹಿ ನೋಡಿ ಅಲ್ಲಿಗೆ ಮರೆತು, ತಮ್ಮದೇ ಕೆಲಸದಲ್ಲಿ ತೊಡಗುವ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರೆಲ್ಲರ ಮೆಚ್ಚುಗೆ ಕೊನೆಯ ತನಕ ಉಳಿಯುವಂತೆ ಮಾಡುವುದೇ ಚಾಲೆಂಜ್ ಎನ್ನಬಹುದು.

 ಪ್ರ: ಧಾರಾವಾಹಿಯಲ್ಲಿನ ಕನ್ನಡದ ಕಳಕಳಿಯ ಬಗ್ಗೆ ಏನು ಹೇಳುತ್ತೀರಿ?
   ನನ್ನ ಮಾತೃಭಾಷೆ ತುಳು. ಆದರೆ ಅನ್ನದ ಭಾಷೆ ಕನ್ನಡ. ನನ್ನ ತಂದೆ ಗಣಪತಿ ಆಚಾರ್ಯ ಅವರು ಡಾ.ರಾಜ್‌ಕುಮಾರ್ ಅವರ ಅಭಿಮಾನಿ. ಹಾಗಾಗಿ ಬಾಲ್ಯದಿಂದಲೇ ನನಗೆ ಕನ್ನಡದ ಸಾಂಸ್ಕೃತಿಕ ರಂಗದಲ್ಲಿ ಬೆಳೆಯಲು ಪೂರಕವಾದ ವಾತಾವರಣ ನೀಡಿದರು. ಸಂಗೀತ, ಯಕ್ಷಗಾನ ಕಲಿತ ನಾನು ಕನ್ನಡವನ್ನು ಪ್ರೀತಿಸುತ್ತಲೇ ಬೆಳೆದೆ. ಅದರಲ್ಲಿಯೂ ಟಿ.ಎನ್.ಸೀತಾರಾಮ್ ಅವರಂಥ ಹಿರಿಯ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕನಾಗಿ ಪಡೆದ ಅನುಭವ ತುಂಬ ದೊಡ್ಡದು. ಅವರು ಕನ್ನಡಕ್ಕೆ, ಕನ್ನಡ ಕಾವ್ಯಗಳಿಗೆ ನೀಡುವ ಒತ್ತು ಇವೆಲ್ಲವೂ ನನ್ನ ಮೇಲೆ ಮೂಡಿಸಿರುವ ಪ್ರಭಾವ ಕನ್ನಡತಿಯ ನಿರ್ದೇಶಕನಾಗಿ ನನ್ನಲ್ಲಿಯೂ ಕಾಣಿಸಿರಬಹುದು. ಪ್ರೇಕ್ಷಕರು ಕೂಡ ಅದೇ ಮಟ್ಟದಲ್ಲಿ ಸ್ಪಂದಿಸುತ್ತಿರುವುದು ಖುಷಿಯ ವಿಚಾರ.

ಪ್ರ: ‘ಕನ್ನಡತಿ’ಯಲ್ಲಿ ಟಿ.ಎನ್.ಸೀತಾರಾಮ್ ಅವರು ನಟಿಸಲಿದ್ದಾರೆಯೇ?
    ತಾವು ನಟಿಸುವುದಾದರೆ ಒಂದಷ್ಟು ಕಂಡಿಶನ್ಸ್ ಅಪ್ಲೈ ಆಗುತ್ತದೆ ಎಂದು ವಾಹಿನಿಯ ಮುಖ್ಯಸ್ಥರೊಂದಿಗೆ ಅವರು ಹೇಳಿಕೊಂಡಿದ್ದಾಗಿ ಕೇಳಿದ್ದೇನೆ. ಅದು ನಿಜ ಇರಬಹುದು. ಯಾಕೆಂದರೆ ಅವರೇ ಒಬ್ಬ ನಿರ್ದೇಶಕರಾದ ಕಾರಣ, ಅವರ ಪಾತ್ರ ಹೀಗೆಯೇ ಇರಬೇಕು ಎನ್ನುವ ಕಲ್ಪನೆ ಅವರಲ್ಲಿಯೂ ಇರಬಹುದು. ಅದಕ್ಕೆ ತಕ್ಕಂತೆ ಕತೆ, ಸಂದರ್ಭ ಮೂಡಿಬಂದರೆ ಅವರು ನಟಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಕೂಡ ಅವರ ಅಭಿಮಾನಿಯಾಗಿ, ಬಳಿಕ ಅವರ ಶಿಷ್ಯನಾಗಿ, ಆನಂತರ ನಿರ್ದೇಶಕನಾದವನು. ಹಾಗಾಗಿ ತಂಡಕ್ಕೆ ಅವರ ಆಗಮನವಾದರೆ ವೈಯಕ್ತಿಕವಾಗಿ ನನಗಂತೂ ತುಂಬಾನೇ ಖುಷಿಯಾಗುತ್ತದೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News