×
Ad

ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್: ಮದ್ರಾಸ್ ಐಐಟಿ ತಾತ್ಕಾಲಿಕ ಲಾಕ್ ಡೌನ್

Update: 2020-12-14 16:31 IST

ಚೆನ್ನೈ,ಡಿ.14: 104 ಮಂದಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಯ ವೇಳೆ ಪಾಸಿಟಿವ್ ಫಲಿತಾಂಶ ಬಂದಿರುವ ಕಾರಣ ಮದ್ರಾಸ್ ಐಐಟಿಯನ್ನು ತಾತ್ಕಾಲಿಕವಾಗಿ ಲಾಕ್ ಡೌನ್ ಗೆ ಒಳಪಡಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಹಾಗೂ ಮದ್ರಾಸ್ ಐಐಟಿ ಆಡಳಿತ ಮಂಡಳಿಯು ಕ್ಯಾಂಪಸ್ ನಲ್ಲಿ ಕೊರೋನ ವೈರಸ್ ಹರಡಲು ಕಾರಣವೇನು ಎಂಬುವುದನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎನ್ನಲಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಕ್ಯಾಂಪಸ್ ನ ಮೆಸ್ ನಲ್ಲಿ ಜನದಟ್ಟನೆಯ ಪರಿಣಾಮ ವೈರಸ್ ಹರಡಿರಬಹುದು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಸರಕಾರವು ಡಿ.7ರಿಂದ ವಿದ್ಯಾಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಿದ ಬಳಿಕ ನಡೆದ ಪ್ರಥಮ ಘಟನೆಯು ಇದಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಹತ್ತು ದಿನಗಳಲ್ಲಿ ಕ್ಯಾಂಪಸ್ ನ ಒಟ್ಟು 71 ಮಂದಿಯ ರಿಪೋರ್ಟ್ ಪಾಸಿಟಿವ್ ಆಗಿದ್ದು, ಸೋಮವಾರದಂದು 33 ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

ಈ ಕುರಿತು ಚೆನ್ನೈನಲ್ಲಿ ಮಾತನಾಡಿದ ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್, “ನಾವು ಒಟ್ಟು 447 ಸ್ಯಾಂಪಲ್ ಗಳನ್ನುಪಡೆದುಕೊಂಡಿದ್ದು, ಪಾಸಿಟಿವಿಟಿ ರೇಟ್ 20% ಇದೆ. ನಾಗರಿಕರು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ನಾವು ಸಾಧ್ಯವಾದಷ್ಟು ಪರೀಕ್ಷೆಗಳನ್ನು ನಡೆಸುತ್ತಿದ್ದು, ವೈರಸ್ ತಡೆಗಟ್ಟುವಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ಕಿಂಗ್ಸ್ ಇನ್ಸ್ಟಿಟ್ಯೂಟ್ ನಲ್ಲಿ ದಾಖಲಾಗಿರುವವರು ಸದ್ಯ ಚೇತರಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕೊಠಡಿ ಬಿಟ್ಟು ಹೊರ ಬರದಂತೆ ಸೂಚನೆ ನೀಡಲಾಗಿದೆ. ಕಾಲೇಜು ಮೆಸ್ ಅನ್ನು ಮುಚ್ಚಲು ಆದೇಶಿಸಲಾಗಿದೆ. ವಿದ್ಯಾರ್ಥಿಗಳು ಇರುವಲ್ಲಿಗೇ ಅವರಿಗೆ ಅವಶ್ಯವಿರುವ ವಸ್ತುಗಳನ್ನು ತಲುಪಿಸಲಾಗುತ್ತದೆ. ಉಳಿದ ಎಲ್ಲಾ ವಿದ್ಯಾಕೇಂದ್ರಗಳ ಕುರಿತು ನಿಗಾ ಇಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರೂ ತಾವು ಆಹಾರ ಸೇವಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲು ಸಲಹೆ ನೀಡುತ್ತಿದ್ದೇನೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಐಐಟಿ ಆಡಳಿತ ಮಂಡಳಿಯೂ ನಮ್ಮೊಂದಿಗೆ ಸಹಕಾರ ನೀಡುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಐಐಟಿ ಆಡಳಿತ ಮಂಡಳಿ, “ನಾವು ಈಗಾಗಲೇ ಲ್ಯಾಬ್, ಗ್ರಂಥಾಲಯ ಸೇರಿದಂತೆ ನಮ್ಮ ಎಲ್ಲ ಕೇಂದ್ರಗಳನ್ನು ತಾತ್ಕಾಳಿಕವಾಗಿ ಮುಚ್ಚಿದ್ದೇವೆ. ಕೇವಲ 10% ವಿದ್ಯಾರ್ಥಿಗಳಷ್ಟೇ ಹಾಸ್ಟೆಲ್ ನಲ್ಲಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ಅವರ ಕೊಠಡಿಗೆ ತಲುಪಿಸಲಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News