ಭಾರತೀಯ ಸೇನೆ ಪರಾಕ್ರಮದಿಂದ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2020-12-14 15:46 GMT

ಹೊಸದಿಲ್ಲಿ, ಡಿ. 14: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನೆಯ ದಾಳಿಯನ್ನು ಭಾರತ ಸೇನೆ ಸಮರ್ಥವಾಗಿ ಎದುರಿಸಿದೆ. ಭಾರತ ಸೇನೆ ಅತ್ಯಂತ ಪರಾಕ್ರಮದಿಂದ ಹೋರಾಡಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.

ಇಂಡಸ್ಟ್ರಿ ಚೇಂಬರ್ ಎಫ್‌ಐಸಿಸಿಐಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಹಿಮಾಲಯದ ಕಣಿವೆಯಲ್ಲಿ ಅಪ್ರಚೋದಿತ ದಾಳಿ ನಡೆಯುತ್ತಿರುವುದು ಜಗತ್ತು ಹೇಗೆ ಬದಲಾಗುತ್ತಿದೆ ಹಾಗೂ ಅಸ್ತಿತ್ವದಲ್ಲಿರುವ ಒಪ್ಪಂದ ಹೇಗೆ ಸವಾಲಾಗಿವೆ ಎಂಬುದನ್ನು ನಮಗೆ ತೋರಿಸಿ ಕೊಟ್ಟಿದೆ. ಹಿಮಾಲಯ ಕಣಿವೆಯಲ್ಲಿ ಮಾತ್ರವಲ್ಲದೆ ಇಂಡೋ-ಫೆಸಿಪಿಕ್‌ನಾದ್ಯಂತ ಅಧಿಕಾರ ಹೊಂದಲು ಕೂಡ ಚೀನಾ ಪ್ರಯತ್ನಿಸುತ್ತಿದೆ ಎಂದರು.

‘‘ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಸಶಸ್ತ್ರ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಸವಾಲನ್ನು ಎದುರಿಸುವಲ್ಲಿ ಭಾರತದ ಸೇನಾ ಪಡೆ ಅನುಕರಣೀಯ ಹಾಗೂ ಗಮನಾರ್ಹ ಪರಾಕ್ರಮ ತೋರಿಸಿವೆ’’ ಎಂದು ಸಿಂಗ್ ಹೇಳಿದರು.

ಚೀನಾ ಹಾಗೂ ಭಾರತ ಸೇನೆಯ ನಡುವಿನ ವ್ಯತ್ಯಾಸದ ಗ್ರಹಿಕೆಯ ಬಗ್ಗೆ ಮಾತನಾಡಿದ ಸಿಂಗ್, ವಾಸ್ತವ ಗಡಿಯ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾದಾಗಲೆಲ್ಲ ಭಾರತ ಹಾಗೂ ಚೀನಾ ಸೇನೆಯ ಶಕ್ತಿಯನ್ನು ಹೋಲಿಸಲಾಗುತ್ತದೆ ಎಂದರು.

ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಸಿಂಗ್, ನಾವು ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತರು. ನಮಗೆ ಯಾರದೇ ಬೆಂಬಲ ಇಲ್ಲದಿದ್ದರೂ ಇದುವರೆಗೆ ಏಕಾಂಗಿಯಾಗಿ ಹೋರಾಡಿದ್ದೇವೆ. ಆದರೆ, ಈಗ ಭಯೋತ್ಪಾದನೆಯ ಉಗಮ ಪಾಕಿಸ್ತಾನ ಎಂಬುದು ಅವರಿಗೆ ಅರಿವಾಗಿದೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳು ರೈತರ ಸುಧಾರಣೆಗಾಗಿಯೇ ಇವೆ. ಆದುದರಿಂದ ಅದನ್ನು ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೂ ರೈತರ ಸಮಸ್ಯೆಗಳನ್ನು ಅವರ ಬೇಡಿಕೆಗಳನ್ನು ಸರಕಾರ ಖಂಡಿತವಾಗಿ ಆಲಿಸಲಿದೆ. ರೈತರೊಂದಿಗೆ ಮುಕ್ತ ಮಾತುಕತೆ, ಚರ್ಚೆಗೆ ಸಿದ್ಧವಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News