ಐವರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುಖ್ಯಶಿಕ್ಷಕನ ಬಂಧನ
ತೆಲಂಗಾಣ,ಡಿ.16: 7ರಿಂದ 11ರ ಹರೆಯದ ಐವರು ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಮುಖ್ಯ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆಯು ತೆಲಂಗಾಣದ ಭದ್ರಾದ್ರಿ ಕೋತ್ತೆಗುಡಮ್ ಜಿಲ್ಲೆಯ ಎಂಬ ಪ್ರದೇಶದಲ್ಲಿ ನಡೆದಿದೆ.
ಕೋವಿಡ್ ಕಾರಣದಿಂದಾಗಿ ಸರಕಾರವು ಶಿಕ್ಷಕರಿಗೆ 50% ಹಾಜರಾತಿ ವ್ಯವಸ್ಥೆಯನ್ನು ಮಾಡಿತ್ತು. ಹಾಗಾಗಿ ಒಟ್ಟು ಇಬ್ಬರು ಶಿಕ್ಷಕರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಪೈಕಿ 40ರ ಹರೆಯದ ಮುಖ್ಯ ಶಿಕ್ಷಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ndtv.com ವರದಿ ಮಾಡಿದೆ.
ನಿರಂತರ ದೌರ್ಜನ್ಯದಿಂದ ಬಾಲಕಿಯೋರ್ವಳು ಅಸ್ವಸ್ಥಳಾಗಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಬಳಿಕ ಎಲ್ಲ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಒಟ್ಟು ಐವರು ವಿದ್ಯಾರ್ಥಿನಿಯರು ತಮ್ಮ ಮೇಲೆ ಮುಖ್ಯ ಶಿಕ್ಷಕ ದೌರ್ಜನ್ಯವೆಸಗಿದ್ದಾಗಿ ತಿಳಿಸಿದ್ದಾರೆ. ಅಶ್ಲೀಲ ವೀಡಿಯೋಗಳನ್ನು ತೋರಿಸಿದ್ದು ಮಾತ್ರವಲ್ಲದೇ ಈ ಕುರಿತು ಯಾರಿಗೂ ಮಾಹಿತಿ ನೀಡಬಾರದೆಂದು ಬಾಲಕಿಯರನ್ನು ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ.
“ಇದು ಆದಿವಾಸಿಗಳು ಹೆಚ್ಚಿರುವಂತಹ ಪ್ರದೇಶವಾಗಿದೆ. ಬಾಲಕಿಯರನ್ನು ಕೌನ್ಸೆಲಿಂಗ್ ಗೆ ಕಳುಹಿಸುವ ಏರ್ಪಾಟು ಮಾಡಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಜಿಲ್ಲೆಯ ಪೊಲೀಸ್ ಅಧೀಕ್ಷಕ ಸುನೀಲ್ ದತ್ ತಿಳಿಸಿದ್ದಾಗಿ ndtv.com ವರದಿ ಮಾಡಿದೆ.