ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಹೆಚ್ಚಳ
ಹೊಸದಿಲ್ಲಿ: ಅಡುಗೆ ಅನಿಲ ಎಲ್ ಪಿಜಿ ಬೆಲೆ ಬುಧವಾರ ಪ್ರತಿ ಸಿಲಿಂಡರ್ ಗೆ 50 ರೂ. ಹೆಚ್ಚಳವಾಗಿದೆ. ಈ ತಿಂಗಳಲ್ಲಿ ಎರಡನೇ ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ.
ಇದೇ ವೇಳೆ ವಾಯುಯಾನ ಟರ್ಬೈನ್ ಇಂಧನ(ಎಟಿಎಫ್)ಬೆಲೆಯನ್ನು ಶೇ.6.3ರಷ್ಟು ಹೆಚ್ಚಿಸಲಾಗಿದೆ.
ಸಬ್ಸಿಡಿರಹಿತ ಎಲ್ ಪಿಜಿ ಬೆಲೆ ಪ್ರತಿ 14.2 ಕೆಜಿ ಸಿಲಿಂಡರ್ ಗೆ 644ರಿಂದ 694 ರೂ.ಗೆ ಹೆಚ್ಚಳವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳ ಬೆಲೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ ನಲ್ಲಿ ಎರಡನೇ ಬಾರಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಡಿಸೆಂಬರ್ 1 ರಂದು ಪ್ರತಿ ಸಿಲಿಂಡರ್ ಗೆ 50 ರೂ. ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು ಜುಲೈ ತಿಂಗಳಿನಿಂದ ಎಲ್ ಪಿಜಿ ಬೆಲೆ ಪ್ರತಿ ಸಿಲಿಂಡರ್ ಗೆ 594 ರೂ. ಆಗಿತ್ತು.ಬೆಲೆಯಲ್ಲಿ ಹೆಚ್ಚಳವಾಗಿರಲಿಲ್ಲ. ಮೇ ತಿಂಗಳಿನಿಂದ ಅಡುಗೆ ಅನಿಲ ಗ್ರಾಹಕರು ಸಬ್ಸಿಡಿ ಹಣವನ್ನು ಸ್ವೀಕರಿಸಿಲ್ಲ. ಈ ತಿಂಗಳು ಸಿಲಿಂಡರ್ ಗಳ ಬೆಲೆ ಹೆಚ್ಚಳವಾಗಿರುವ ಕಾರಣ ಗ್ರಾಹಕರಿಗೆ ಸಬ್ಸಿಡಿ ಪಾವತಿ ಮತ್ತೆ ಆರಂಭವಾಗುವ ಸಾದ್ಯತೆಯಿದೆ.
ಪ್ರತಿ 15 ದಿನಕ್ಕೊಮ್ಮೆ ಎಲ್ ಪಿಜಿ ಬೆಲೆ ಪರಿಷ್ಕೃರಿಸಲಾಗುತ್ತದೆ.
14.2 ಕೆಜಿ ಎಲ್ ಪಿಜಿ ಸಿಲಿಂಡರ್ ಗಳ ಜೊತೆಗೆ 5 ಕೆಜಿ ತೂಕದ ಸಿಲಿಂಡರ್ ಗೆ 18 ರೂ. ಹೆಚ್ಚಳವಾಗಿದ್ದರೆ, 19 ಕೆಜಿ ತೂಕದ ಸಿಲಿಂಡರ್ ಗೆ 36.50 ರೂ. ಹೆಚ್ಚಳವಾಗಿದೆ.
ಇದೀಗ ಕೋಲ್ಕತಾದಲ್ಲಿ ಸಬ್ಸಿಡಿ ರಹಿತ ಎಲ್ ಪಿಜಿ ರೂ. 720.50 ರೂ. ಮುಂಬೈನಲ್ಲಿ 694 ರೂ., ಹಾಗೂ ಚೆನ್ನೈನಲ್ಲಿ ರೂ.710 ರೂ. ಆಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅನ್ನು ಅವಲಂಭಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತವೆ.