“ಭದ್ರತೆಯ ಬಗ್ಗೆ ಮಾತನಾಡಿ ಅಂದರೆ, ಸೇನಾ ಸಮವಸ್ತ್ರದ ಕುರಿತು ಮಾತನಾಡುತ್ತಾರೆ”
ಹೊಸದಿಲ್ಲಿ,ಡಿ.16: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ರಕ್ಷಣಾ ಸಂಸದೀಯ ಸಮಿತಿಯ ಸಭೆಯಿಂದ ಹೊರ ನಡೆದಿರುವ ಘಟನೆಯು ಬುಧವಾರ ನಡೆದಿದೆ. ಈ ಕುರಿತು PTI ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ದೇಶದ ಭದ್ರತಾ ಮುಖ್ಯಸ್ಥ ಬಿಪಿನ್ ರಾವತ್ ರವರು ಹಾಜರಿರುವ ಸಭೆಯಲ್ಲಿ ಸೈನ್ಯವನ್ನು ಬಲಪಡಿಸುವ ಕಾರ್ಯವೈಖರಿಯ ಕುರಿತು ಮಾತನಾಡುವ ಬದಲು ಸೈನಿಕರ ಸಮವಸ್ತ್ರದ ಕುರಿತು ಅನವಶ್ಯಕ ಚರ್ಚೆಗಳು ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾಗಿ ವರದಿ ತಿಳಿಸಿದೆ.
ಭದ್ರತಾ ಮುಖ್ಯಸ್ಥರು ಹಾಜರಿದ್ದ ಈ ಸಭೆಯಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸಮವಸ್ತ್ರ ಬದಲಾವಣೆಯ ಕುರಿತಾದಂತೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, “ಭದ್ರತಾ ಮುಖ್ಯಸ್ಥರು ಹಾಜರಿರುವಂತಹ ಈ ಸಭೆಯಲ್ಲಿ ಸೇನೆಯ ಸಮವಸ್ತ್ರದ ಕುರಿತು ಚರ್ಚೆ ನಡೆಸುವುದು ಅನವಶ್ಯಕ. ಅದರ ಬದಲು ಭಾರತದ ರಕ್ಷಣಾ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಹುದು ಮತ್ತು ಲಡಾಖ್ ನಲ್ಲಿ ಯಾವ ರೀತಿಯಲ್ಲಿ ಸೈನ್ಯವನ್ನು ನಿಯೋಜಿಸಬಹುದು ಎಂಬುವುದರ ಕುರಿತು ಚರ್ಚೆ ನಡೆಸಬೇಕು” ಎಂದು ಮಾತು ಮುಂದುವರಿಸಲು ಮುಂದಾದಾಗ ಕಮಿಟಿಯ ಅಧ್ಯಕ್ಷರು ರಾಹುಲ್ ಗಾಂಧಿಗೆ ಮಾತು ಮುಂದುವರಿಸಲು ಅವಕಾಶ ನೀಡಲಿಲ್ಲ ಇಂದು ತಿಳಿದು ಬಂದಿದೆ.
ಈ ಕಾರಣದಿಂದಾಗಿ ರಾಹುಲ್ ಗಾಂಧಿ ತಮ್ಮ ಸಹ ಕಾಂಗ್ರೆಸಿಗರೊಂದಿಗೆ ಸಭೆಯಿಂದ ಹೊರ ನಡೆದಿದ್ದಾಗಿ PTI ಸುದ್ದಿ ಸಂಸ್ಥೆಯು ವರದಿ ಮಾಡಿದೆ.