ಟಿಆರ್‌ಪಿ ಹಗರಣ : ರಿಪಬ್ಲಿಕ್ ಟಿವಿಯ ಸಿಇಒ ಖಾಂಚಂದಾನಿಗೆ ಜಾಮೀನು
ಮುಂಬೈ,ಡಿ.16: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್ ಖಾಂಚಂದಾನಿ ಅವರಿಗೆ ಇಲ್ಲಿಯ ಎಸ್ಪ್ಲನೇಡ್‌ನ ಮುಖ್ಯ ಮಹಾನಗರ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಮಂಗಳವಾರ ಖನ್ಚಂದಾನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.
ರಿಪಬ್ಲಿಕ್ ಟಿವಿ ವಾಹಿನಿಯ ವಿತರಣಾ ಮುಖ್ಯಸ್ಥ ಘನಶ್ಯಾಮ ಸಿಂಗ್ ನೀಡಿದ್ದ ಮಾಹಿತಿಗಳಿಂದ ಟಿಆರ್‌ಪಿ ಹಗರಣದಲ್ಲಿ ಖನ್ಚಂದಾನಿ ಪಾತ್ರವು ಬೆಳಕಿಗೆ ಬಂದಿತ್ತು. ತನ್ನ ಲಾಜಿಕಲ್ ಚಾನೆಲ್ ನಂಬರ್ (ಎಲ್‌ಸಿಎನ್)ನ್ನು ತಿರುಚುವ ಬಗ್ಗೆ ಚರ್ಚಿಸಲು ಮತ್ತು ಕಾರ್ಯತಂತ್ರ ರೂಪಿಸಲು ವಾಹಿನಿಯು ಬಳಸಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಖಾಂಚಂದಾನಿ ಕೂಡ ಇದ್ದರು ಎಂದು ಹೆಸರು ಹೇಳಿಕೊಳ್ಳಲು ಬಯಸದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಸಿಎನ್ ಟಿವಿ ವಾಹಿನಿಗಳಿಗೆ ನೀಡಲಾಗಿರುವ ಗುರುತು ಸಂಖ್ಯೆಯಾಗಿದ್ದು,ವಿವಿಧ ಲಭ್ಯ ವಾಹಿನಿಗಳನ್ನು ಪಡೆಯಲು ವೀಕ್ಷಕರು ತಮ್ಮ ರಿಮೋಟ್‌ಗಳಲ್ಲಿ ಈ ಸಂಖ್ಯೆಯನ್ನು ಒತ್ತುತ್ತಾರೆ. ರಿಪಬ್ಲಿಕ್ ಟಿವಿ ದ್ವಂದ್ವ ಎಲ್‌ಸಿಎನ್ ಬಳಸಿದ್ದು,ಇದು ಅದನ್ನು ಸುದ್ದಿ ವಾಹಿನಿಗಳ ವಿಭಾಗದೊಡನೆ ಮಕ್ಕಳ ವಾಹಿನಿಗಳ ವಿಭಾಗದಲ್ಲಿಯೂ ತೋರಿಸಲು ಅವಕಾಶ ಕಲ್ಪಿಸಿತ್ತು. ಈ ಬಗ್ಗೆ ಖಾಂಚಂದಾನಿ ಗೆ ಸಂಪೂರ್ಣ ಮಾಹಿತಿಯಿತ್ತು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ.
ಮುಂಬೈ ಪೊಲೀಸರು ಖನ್ಚಂದಾನಿಯವರ ನಿರೀಕ್ಷಣಾ ಜಾಮೀನು ಅರ್ಜಿಯು ವಿಚಾರಣೆಗೆ ಬರುವ ಒಂದು ದಿನ ಮೊದಲು ಡಿ.13ರಂದು ಅವರನ್ನು ಅವಸರದಿಂದ ಬಂಧಿಸಿದ್ದ ರೀತಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯವು ಸೋಮವಾರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಖಾಂಚಂದಾನಿ ಪ್ರಕರಣದಲ್ಲಿ 13ನೇ ಬಂಧಿತ ಆರೋಪಿಯಾಗಿದ್ದಾರೆ.