×
Ad

2022ರವರೆಗೆ ಜಗತ್ತಿನ ಕಾಲು ಭಾಗ ಜನರಿಗೆ ಕೊರೋನ ಲಸಿಕೆ ಸಿಗದು: ಅಧ್ಯಯನ ವರದಿ

Update: 2020-12-16 22:16 IST

ವಾಶಿಂಗ್ಟನ್, ಡಿ. 16: ಜಗತ್ತಿನ ಸುಮಾರು ಕಾಲು ಭಾಗ ಜನರಿಗೆ ಕನಿಷ್ಠ 2022ರವರೆಗೆ ಕೋವಿಡ್-19 ಲಸಿಕೆ ಸಿಗಲಾರದು ಎಂದು ಬಿಎಮ್‌ಜೆ ಪತ್ರಿಕೆಯಲ್ಲಿ ಬುಧವಾರ ಪ್ರಕಟಗೊಂಡ ಅಧ್ಯಯನ ವರದಿಯೋಂದು ತಿಳಿಸಿದೆ.

ಅದೇ ವೇಳೆ, ಲಸಿಕೆಗಳನ್ನು ಅಭಿವೃದ್ಧಿಪಡಿಸುವುದು ಎಷ್ಟು ಸವಾಲಿನ ಕೆಲಸವಾಗಿತ್ತೋ ಅವುಗಳ ವಿತರಣೆಯೂ ಅಷ್ಟೇ ಸವಾಲಿನ ಕೆಲಸವಾಗಲಿದೆ ಎಂಬುದಾಗಿಯೂ ಅದು ಎಚ್ಚರಿಸಿದೆ.

ಜಗತ್ತಿನಾದ್ಯಂತ 370 ಕೋಟಿ ವಯಸ್ಕರು ಕೋವಿಡ್-19 ಲಸಿಕೆಯನ್ನು ಪಡೆಯಲು ಉತ್ಸುಕರಾಗಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ. ಹಾಗಾಗಿ, ವಿಶೇಷವಾಗಿ ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಬೇಡಿಕೆಗೆ ಸಮನಾದ ಪೂರೈಕೆಯನ್ನು ಖಾತರಿಪಡಿಸಲು, ಲಸಿಕೆಗಳ ನ್ಯಾಯೋಚಿತ ಹಾಗೂ ತಾರತಮ್ಯರಹಿತ ವಿತರಣೆಗಾಗಿ ಯೋಜನೆಗಳನ್ನು ರೂಪುಗೊಳಿಸುವ ಅಗತ್ಯವಿದೆ ಎಂದು ಅದು ಪ್ರತಿಪಾದಿಸಿದೆ.

‘‘ಕೋವಿಡ್-19 ಲಸಿಕೆಗಳ ಭವಿಷ್ಯದ ಪೂರೈಕೆಗಳನ್ನು ಶ್ರೀಮಂತ ದೇಶಗಳು ಈಗಾಗಲೇ ತಮಗಾಗಿ ಕಾದಿರಿಸಿವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ ಆದರೆ, ಇತರ ದೇಶಗಳಿಗೆ ಲಸಿಕೆ ಲಭಿಸುವ ಬಗ್ಗೆ ಖಾತರಿಯಿಲ್ಲ’’ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ಹೇಳಿದ್ದಾರೆ.

ಜಗತ್ತಿನಾದ್ಯಂತ ಪ್ರಾಯೋಗಿಕ ಹಂತದಲ್ಲಿರುವ 48 ಕೋವಿಡ್-19 ಲಸಿಕೆಗಳ ಪೈಕಿ 13 ಸಂಭಾವ್ಯ ಲಸಿಕೆಗಳ ಒಟ್ಟು 748 ಕೋಟಿ ಡೋಸ್‌ಗಳು ಅಥವಾ 376 ಕೋಟಿ ಕೋರ್ಸ್‌ಗಳನ್ನು ಹಲವು ದೇಶಗಳು ನವೆಂಬರ್ 15ರ ವೇಳೆಗೆ ಕಾದಿರಿಸಿವೆ ಎಂದು ಅವರು ತಿಳಿಸಿದ್ದಾರೆ.

ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಲಸಿಕೆಗಳು ಜಾಗತಿಕ ಜನಸಂಖ್ಯೆಯ ಕೇವಲ 14 ಶೇಕಡದಷ್ಟಿರುವ ಶ್ರೀಮಂತ ದೇಶಗಳಿಗೆ ಹೋಗುತ್ತವೆ. ಆದರೆ ಜಾಗತಿಕ ಜನಸಂಖ್ಯೆಯ 85 ಶೇಕಡಕ್ಕಿಂತಲೂ ಅಧಿಕವಿರುವ ದೇಶಗಳಿಗೆ ಲಸಿಕೆಗಳ ಉಳಿದ ಭಾಗ ಹೋಗುತ್ತದೆ ಎಂದು ಅಧ್ಯಯನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News