ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿಗೆ ಶಿಲಾನ್ಯಾಸ

Update: 2020-12-17 07:10 GMT
ಸಾಂದರ್ಭಿಕ ಚಿತ್ರ

ಅಯೋಧ್ಯೆ,ಡಿ.17: ಸುಪ್ರೀಮ್ ಕೋರ್ಟ್ ತೀರ್ಪಿನ ಪ್ರಕಾರ, ಅಯೋಧ್ಯೆಯ ಬಾಬರಿ ಮಸೀದಿ ನೆಲೆಗೊಂಡಿದ್ದ 20 ಕಿ.ಮಿ ದೂರದಲ್ಲಿ ನೂತನ ಮಸೀದಿ ನಿರ್ಮಾಣವಾಗಲಿದ್ದು, ಶಿಲಾನ್ಯಾಸ ಕಾರ್ಯಕ್ರಮವು ಜನವರಿ 26ರ ಗಣರಾಜ್ಯೋತ್ಸವದಂದು ನಡೆಯಲಿದೆ ಎಂದು ತಿಳಿದು ಬಂದಿದೆ. 71ನೇ ಗಣರಾಜ್ಯೋತ್ಸವದಂದು ಅಯೋಧ್ಯೆಯ ದಿನ್ನಿಪುರ್ ಎಂಬಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು timesofindia.com ವರದಿ ಮಾಡಿದೆ.

ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡ್ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಅನ್ನು ಸ್ಥಾಪಿಸಿದ ಆರು ತಿಂಗಳ ಬಳಿಕ ಮಸೀದಿ ಶಿಲಾನ್ಯಾಸದ ತೀರ್ಮಾನವನ್ನು ಕೈಗೊಳ್ಳಲಾಗಿದೆ. “ 70 ವರ್ಷಗಳ ಹಿಂದೆ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನವನ್ನೇ ನಾವು ಮಸೀದಿಯ ಶಿಲಾನ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಸಂವಿಧಾನವು ಬಹುತ್ವವನ್ನು ಸಾರುತ್ತದೆ. ಹಾಗೆಯೇ ನಮ್ಮ ಮಸೀದಿ ನಿರ್ಮಾಣವೂ ಇದೇ ಉದ್ದೇಶವನ್ನು ಹೊಂದಿದೆ ಎಂದು ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ನ ಕಾರ್ಯದರ್ಶಿ ಅತರ್ ಹುಸೈನ್ ತಿಳಿಸಿದ್ದಾರೆ.

ಮಸೀದಿಯ ನೀಲಿನಕ್ಷೆ, ಇತರ ವ್ಯವಸ್ಥೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಗ್ರಂಥಾಲಯ, ಕಮ್ಯುನಿಟಿ ಕಿಚನ್ ಮುಂತಾದ ಯೋಜನೆಗಳ ವಿನ್ಯಾಸವನ್ನು ಡಿ.19ಕ್ಕೆ ಬಿಡುಗಡೆಗೊಳಿಸಲಾಗುವುದು. ಮಸೀದಿಯಲ್ಲಿ ಏಕಕಾಲಕ್ಕೆ 2,000 ಮಂದಿಗೆ ನಮಾಝ್ ಮಾಡಲು ವ್ಯವಸ್ಥೆಯಿದ್ದು, ವಿನ್ಯಾಸವು ವೃತ್ತಾಕರದಲ್ಲಿರಲಿದೆ ಎಂದು ಮುಖ್ಯ ವಿನ್ಯಾಸಗಾರ ಪ್ರೊ. ಅಖ್ತರ್ ಹೇಳಿದ್ದಾರೆಂದು timesofindia.com ವರದಿ ಮಾಡಿದೆ.

“ನೂತನ ಮಸೀದಿಯು ಬಾಬರಿ ಮಸೀದಿಗಿಂತ ದೊಡ್ಡದಾಗಿರಲಿದ್ದು, ಆದರೆ, ಬಾಬರಿ ಮಸೀದಿಯ ವಿನ್ಯಾಸವನ್ನು ಹೋಲುವುದಿಲ್ಲ. ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯು 5 ಎಕರೆ ಸ್ಥಳದ ಮಧ್ಯದಲ್ಲಿ ಇರಲಿದ್ದು, ಈ ಆಸ್ಪತ್ರೆ ಮೂಲಕ ನಾವು 1400 ವರ್ಷಗಳ ಹಿಂದೆ ಪ್ರವಾದಿ  ಕಲಿಸಿದ ಇಸ್ಲಾಮಿನ ನೈಜ ತತ್ವವನ್ನು ಸಾರಲಿದ್ದೇವೆ. ಆಸ್ಪತ್ರೆಯು ಮಸೀದಿಯ ವಾಸ್ತುಶಿಲ್ಪದೊಂದಿಗೆ ಹೋಲಿಕೆಯಾಗಲಿದ್ದು, ಇಸ್ಲಾಮಿನ ಚಿಹ್ನೆಗಳು ಮತ್ತು ಕ್ಯಾಲಿಗ್ರಫಿಯನ್ನು ಒಳಗೊಂಡಿರಲಿದೆ. ಒಟ್ಟು 300 ಬೆಡ್ ಗಳಿರುವ ಈ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ” ಎಂದು ಅಖ್ತರ್ ಮಾಹಿತಿ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News