×
Ad

ಆರು ಮಂದಿ ರೈತ ನಾಯಕರಿಗೆ ತಲಾ 50 ಲಕ್ಷ ರೂ.ಬಾಂಡ್ ಸಲ್ಲಿಸುವಂತೆ ಸೂಚಿಸಿದ ಉತ್ತರಪ್ರದೇಶ ಸರಕಾರ!

Update: 2020-12-17 12:45 IST

ಲಕ್ನೊ: ಸ್ಥಳೀಯ ರೈತರಿಗೆ ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪ ಹೊರಿಸಿ ಸಂಭಾಲ್ ಜಿಲ್ಲಾಡಳಿತವು ಆರು ಮಂದಿ ರೈತ ನಾಯಕರಿಗೆ ಶ್ಯೂರಿಟಿಯ ಜೊತೆಗೆ ತಲಾ 50 ಲಕ್ಷ ರೂ. ವೈಯಕ್ತಿಕ ಬಾಂಡ್‌ಗಳನ್ನು ಸಲ್ಲಿಸುವಂತೆ ನೋಟಿಸ್‌ಗಳನ್ನು ನೀಡಿದೆ. ಸ್ಥಳೀಯ ರೈತರಿಗೆ ಈ ಆರು ಮಂದಿ ನಾಯಕರು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.

ಆರು ಮಂದಿ ರೈತ ನಾಯಕರಲ್ಲಿ ಭಾರತೀಯ ಕಿಸಾನ್ ಯೂನಿಯನ್(ಅಸ್ಲಿ)ಸಂಭಾಲ್ ಜಿಲ್ಲಾಧ್ಯಕ್ಷ ರಾಜ್‌ಪಾಲ್ ಸಿಂಗ್ ಹಾಗೂ ಇತರ ರೈತ ನಾಯಕರುಗಳಾದ ಜೈವೀರ್ ಹಾಗೂ ಸತ್ಯೇಂದ್ರ ಅಲಿಯಾಸ್ ಗಂಜಾಫಲ್ ಅವರಿದ್ದಾರೆ.

ರೈತ ನಾಯಕರು ಹಳ್ಳಿಗಳಲ್ಲಿ ರೈತರನ್ನು ಪ್ರಚೋದಿಸುತ್ತಿದ್ದಾರೆ ಹಾಗೂ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಶಾಂತಿ ಕದಡಬಹುದು ಎಂದು ಪೊಲೀಸರ ವರದಿ ಹೇಳುತ್ತಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ದೀಪೇಂದ್ರ ಯಾದವ್ ಈ ಬೆಳವಣಿಗೆಯನ್ನು ದೃಢಪಡಿಸಿದರು. ಪೊಲೀಸರು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಸಿಆರ್‌ಪಿಸಿಯ ಸೆಕ್ಷನ್ 111(ಶಾಂತಿ ಉಲ್ಲಂಘನೆ ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ಮ್ಯಾಜಿಸ್ಟ್ರೇಟ್ ಆದೇಶ)ಅಡಿಯಲ್ಲಿ ನೋಟಿಸ್ ನೀಡಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್ ರಾಜ್ಯಾಧ್ಯಕ್ಷ ರಿಷಭ್ ಚೌಧರಿ ಮಾತನಾಡುತ್ತಾ, "ಇಷ್ಟು ದೊಡ್ಡ ಮೊತ್ತದ ನೋಟಿಸ್ ಕಳುಹಿಸುವುದು ಸರಕಾರದಿಂದ ಕಿರುಕುಳವಾಗಿದೆ. ನಾವೆಲ್ಲರೂ ಹೊಸ ಕೃಷಿ ಕಾನೂನಿನ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ತಪ್ಪುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ನಮಗೆಲ್ಲರಿಗೂ ಹಕ್ಕುಗಳಿವೆ''ಎಂದು ಅವರು ಹೇಳಿದರು.

ಆರೋಪಗಳನ್ನು ನಿರಾಕರಿಸಿದ ರಾಜ್ಪಾಲ್ ಸಿಂಗ್, "ನಾವು ಗ್ರಾಮದ ರೈತರೊಂದಿಗೆ ಸಭೆ ನಡೆಸುತ್ತಿದ್ದೇವೆ ಹಾಗೂ ಹೊಸ ಕೃಷಿ ಕಾಯ್ದೆಗಳ ಬಗ್ಗೆ ವಿವರಿಸುತ್ತಿದ್ದೇವೆ'' ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News