×
Ad

ಐಐಟಿ ಶಿಕ್ಷಕರ ನೇಮಕಾತಿಗೆ ಜಾತಿ ಆಧಾರಿತ ಮೀಸಲಾತಿಯಿಂದ ವಿನಾಯಿತಿ ನೀಡಲು ತಜ್ಞ ಸಮಿತಿ ಶಿಫಾರಸು

Update: 2020-12-17 17:08 IST

ಹೊಸದಿಲ್ಲಿ, ಡಿ.17: ಅಧ್ಯಾಪಕರ ನೇಮಕಾತಿಯಲ್ಲಿ ಮೀಸಲಾತಿಯಿಂದ ಐಐಟಿಗಳಿಗೆ ವಿನಾಯಿತಿ ನೀಡಬಹುದು ಎಂದು ಕೇಂದ್ರ ಸರಕಾರ ನೇಮಿಸಿರುವ ಸಮಿತಿ ಶಿಫಾರಸು ಮಾಡಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ವಿಪರ್ಯಾಸವೆಂದರೆ, ಪ್ರವೇಶ ಮತ್ತು ನೇಮಕಾತಿಯಲ್ಲಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕ್ರಮಗಳನ್ನು ಸೂಚಿಸಲು ಸಮಿತಿಯನ್ನು ರೂಪಿಸಲಾಗಿತ್ತು ಎಂದು ಪತ್ರಿಕೆಯ ವರದಿ ತಿಳಿಸಿದೆ.

2019ರ ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ(ಸಿಇಐ)ಯಡಿ ನಿಗದಿಗೊಳಿಸಿರುವ ಮೀಸಲಾತಿಯಿಂದ ದೇಶದ 23 ಐಐಟಿಗಳಿಗೆ ವಿನಾಯಿತಿ ನೀಡಬಹುದು. ನಿರ್ದಿಷ್ಟ ಕೋಟಾ ನಿಗದಿಗೊಳಿಸುವ ಬದಲು ಅಧ್ಯಾಪಕರ ಉದ್ದೇಶಿತ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು 8 ಸದಸ್ಯರ ಸಮಿತಿ ಶಿಫಾರಸು ಮಾಡಿದೆ. ಕಳೆದ ಜೂನ್ 17ರಂದು ಸಮಿತಿಯು 5 ಪುಟಗಳ ವರದಿಯನ್ನು ಕೇಂದ್ರ ಶಿಕ್ಷಣ ಇಲಾಖೆಗೆ ಸಲ್ಲಿಸಿತ್ತು. ಆದರೆ ವರದಿಯ ವಿವರ ಉತ್ತರ ಪ್ರದೇಶದಲ್ಲಿ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯ ಮೂಲಕ ಪಡೆದ ಮಾಹಿತಿಯಿಂದ ಬುಧವಾರ (ಡಿ.16) ಬಹಿರಂಗಗೊಂಡಿದೆ.

ದಿಲ್ಲಿ ಐಐಟಿ ನಿರ್ದೇಶಕ ವಿ. ರಾಮಗೋಪಾಲ್ ರಾವ್ ನೇತೃತ್ವದ ಸಮಿತಿಯಲ್ಲಿ ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಬುಡಕಟ್ಟು ವ್ಯವಹಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪ್ರತಿನಿಧಿಗಳು, ಮುಂಬೈ ಮತ್ತು ಮದ್ರಾಸ್ ಐಐಟಿಯ ರಿಜಿಸ್ಟ್ರಾರ್ ಸದಸ್ಯರಾಗಿದ್ದಾರೆ.

 ಸಮಿತಿ ತನ್ನ ವರದಿಯನ್ನು ‘ಎ’ ಮತ್ತು ‘ಬಿ’ ಎಂಬ ಎರಡು ಭಾಗಗಳಲ್ಲಿ ಸಲ್ಲಿಸಿದೆ. ‘ಎ’ ಭಾಗ ಸೂಕ್ತವಾಗದಿದ್ದರೆ ‘ಬಿ’ ಭಾಗವನ್ನು ಪರಿಗಣಿಸಬಹುದು. ಸಿಇಐ ಕಾಯ್ದೆಯಡಿ ಸೂಚಿಸಿರುವ ಶ್ರೇಷ್ಠ ಸಂಸ್ಥೆಗಳ ಪಟ್ಟಿಯಲ್ಲಿ ಐಐಟಿಗಳನ್ನೂ ಸೇರಿಸಬಹುದು ಎಂದು ‘ಎ’ ಭಾಗದಲ್ಲಿ ಸಲಹೆ ನೀಡಲಾಗಿದೆ. ಸ್ವರೂಪ, ಕಾರ್ಯನಿರ್ವಹಣೆ ಮತ್ತು ಚಟುವಟಿಕೆಯನ್ನು ಪರಿಗಣಿಸಿ ಐಐಟಿಗಳನ್ನು ಸಿಇಐ ಕಾಯ್ದೆಯ, ಮೀಸಲಾತಿ ವಿನಾಯಿತಿ ಅನುಬಂಧದಲ್ಲಿ ಸೇರಿಸಬೇಕು. ಈ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ವಿಷಯವನ್ನು ಆಯಾ ಸಂಸ್ಥೆಗಳ ಆಡಳಿತ ಮಂಡಳಿಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ಆಧರಿಸಿ ಸಂಬಂಧಿತ ಆಡಳಿತ ಮಂಡಳಿ ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಥಮ ಶಿಫಾರಸು ಕಾರ್ಯಸಾಧ್ಯವಾಗದಿದ್ದಲ್ಲಿ ‘ಬಿ’ ಭಾಗವನ್ನು ಪರಿಗಣಿಸಬಹುದು. ಆಗ ಅಸಿಸ್ಟೆಂಟ್ ಪ್ರೊಫೆಸರ್ ಮಟ್ಟದ ಹುದ್ದೆಗಳ ನೇಮಕಾತಿ ಸಂದರ್ಭ ಮಾತ್ರ ಮೀಸಲಾತಿಯನ್ನು ಪರಿಗಣಿಸಬಹುದು. ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಮೀಸಲಾತಿ ಅಗತ್ಯವಿಲ್ಲ ಎಂದು ತಿಳಿಸಿದೆ. ಒಂದು ವರ್ಷದಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆಯಿಂದ ಎಸ್ಸಿ/ಎಸ್ಟಿ/ಒಬಿಸಿ/ಇಡಬ್ಲೂಎಸ್ ಕೋಟಾದಡಿ ನೇಮಕಾತಿ ಬಾಕಿಯಿದ್ದರೆ, ಮುಂದಿನ ವರ್ಷ ಸಂಬಂಧಿತ ನೇಮಕಾತಿ ಪ್ರಾಧಿಕಾರದ ಅನುಮೋದನೆ ಪಡೆದು ಮೀಸಲಾತಿ ರದ್ದುಗೊಳಿಸಿ ಈ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬಹುದು . ಮೀಸಲು ವರ್ಗದಿಂದ ಸೂಕ್ತ ಪಿಎಚ್‌ಡಿ ಅಭ್ಯರ್ಥಿಗಳನ್ನು ಆಕರ್ಷಿಸಲು, ಐಐಟಿಗಳಲ್ಲಿ ಎರಡು ವರ್ಷದ ಪೂರ್ವಸಿದ್ಧತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅನುದಾನಿತ) ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News