ಪಶ್ಚಿಮಬಂಗಾಳದ ರೈತನ ಮನೆಯಲ್ಲಿ ಊಟ ಮಾಡಿದ ಅಮಿತ್ ಶಾ

Update: 2020-12-19 18:57 GMT

ಕೋಲ್ಕತಾ: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸಚಿವ ಅಮಿತ್ ಶಾ ಈಸ್ಟ್ ಮಿಡ್ನಾಪುರದ ಬಲಿಜುರಿ ಹಳ್ಳಿಯಲ್ಲಿರುವ ರೈತನ ಮನೆಯಲ್ಲಿ ಶನಿವಾರ ಭೋಜನ ಸವಿದರು.

ಎರಡು ದಿನಗಳ ಪಶ್ಚಿಮಬಂಗಾಳದ ಭೇಟಿಯಲ್ಲಿರುವ ಅಮಿತ್ ಶಾ ಅವರು ಪಶ್ಚಿಮ ಮೆದಿನಿಪುರ್ ಜಿಲ್ಲೆಯ ಬಲಿಜುರಿ ಗ್ರಾಮದಲ್ಲಿ ರೈತನೊಬ್ಬನ ಮನೆಯಲ್ಲಿ ಊಟ ಮಾಡಿದರು. ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಅವರಿದ್ದರು.

ಈ ವರ್ಷದ ನವೆಂಬರ್‌ನ ಬಳಿಕ ಎರಡನೇ ಬಾರಿ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿರುವ ಶಾ ಮಿಡ್ನಾಪುರ ಜಿಲ್ಲೆಯಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಭೇಟಿಯ ವೇಳೆ ಟಿಎಂಸಿ, ಕಾಂಗ್ರೆಸ್, ಸಿಪಿಎಂನ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ಟಿಎಂಸಿ ತೊರೆದಿದ್ದ ಸುವೇಂದು ಅಧಿಕಾರಿ ಮಿಡ್ನಾಪುರದಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

2021ರ ಪಶ್ಚಿಮಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಾಣಲಿದೆ

"ತೃಣಮೂಲ ಕಾಂಗ್ರೆಸ್‌ ನನ್ನನ್ನು ಅವಮಾನಿಸಿತು. ನನ್ನನ್ನು ಅವಮಾನಿಸಿದರು ಬೆನ್ನಿಗೆ ಚೂರಿ ಹಾಕಿದ್ದಾಗಿ ಆರೋಪಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಯಾರ ತಾಯಿಯೂ ಅಲ್ಲ. ಒಬ್ಬ ತಾಯಿ ಮಾತ್ರ ಇದ್ದಾರೆ.ಅದು ಭಾರತ್ ಮಾತಾ. 2021ರ ಪಶ್ಚಿಮಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಾಣಲಿದೆ'' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಬಿಜೆಪಿಗೆ ಸೇರುವ ಮೊದಲು ಟಿಎಂಸಿ ಕಾರ್ಯಕರ್ತರಿಗೆ ಸುವೇಂದು ಅಧಿಕಾರಿ ಸುದೀರ್ಘ ಪತ್ರ ಬರೆದಿದ್ದಾರೆ. ಅಲ್ಲದೆ, ಪಕ್ಷ ಕಟ್ಟಿ ಬೆಳೆಸಿದ ಹಾಗೂ ಅದನ್ನು ಅಧಿಕಾರಕ್ಕೆ ತಂದ ನಾಯಕರನ್ನು ತೃಣಮೂಲ ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದರು.

ರ್ಯಾಲಿಯಲ್ಲಿ ಮಾತನಾಡಿದ ಸುವೇಂದು ಅಧಿಕಾರಿ ಅವರು ಅಮಿತ್ ಶಾ ತನ್ನ ಹಿರಿಯಣ್ಣ ಎಂದು ಹೇಳಿದರು.

‘‘ನಾನು ಕೊರೋನ ಸೋಂಕಿನಿಂದ ಮಲಗಿದ್ದಾಗ ತೃಣಮೂಲ ಕಾಂಗ್ರೆಸ್‌ನ ಯಾವ ಸದಸ್ಯನೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ಆದರೆ, ಬಿಜೆಪಿ ನಾಯಕರು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು’’ ಎಂದು ಸುವೇಂದು ಅಧಿಕಾರಿ ಅವರು ಅಮಿತ್ ಶಾ, ಕೈಲಾಸ್ ವಿಜಯವರ್ಗೀಯ ಹಾಗೂ ದಿಲೀಪ್ ಘೋಷ್ ಇದ್ದ ಬಿಜೆಪಿ ರ್ಯಾಲಿಯಲ್ಲಿ ಹೇಳಿದರು.

ಶಾಸಕ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಬಿಜೆಪಿಗೆ ತನ್ನನ್ನು ಸ್ವಾಗತಿಸಿದ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದ ಅಧಿಕಾರಿ ನಾನು ಬಿಜೆಪಿಯೊಂದಿಗೆ ದೀರ್ಘಕಾಲ ಇರುತ್ತೇನೆ ಎಂದು ರ್ಯಾಲಿಯನ್ನುದ್ದೇಶಿಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News