ಕಚ್ಛ್ ನಲ್ಲಿ ಪ್ರಧಾನಿ ಭೇಟಿಯಾಗಿದ್ದು ರೈತರ ನಿಯೋಗವಲ್ಲ ಬದಲು ಬಿಜೆಪಿ ಕಾರ್ಯಕರ್ತರ ನಿಯೋಗ!

Update: 2020-12-19 11:26 GMT

ಹೊಸದಿಲ್ಲಿ,ಡಿ.19: ದಿಲ್ಲಿಯ ಗಡಿಯಲ್ಲಿ ಕಳೆದ ಹಲವಾರು ದಿನಗಳಿಂದ ರೈತರ ಪ್ರತಿಭಟನೆ ಮುಂದುವರಿದಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನ ಕಚ್ಛ್ ನ ಕೆಲ ರೈತರ ಜತೆ ಮಾತುಕತೆ ನಡೆಸಿ ಕೃಷಿ ಕಾನೂನಿನ ಕುರಿತಂತೆ ಅವರಿಗೆ ಮನವರಿಕೆ ಮಾಡಿ ಅವರ ಸಂಶಯಗಳನ್ನು ನಿವಾರಿಸಿದರು ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.

ಆದರೆ ವಾಸ್ತವವಾಗಿ ಇದು ಕೇವಲ ರೈತ ಪ್ರತಿಭಟನೆಯಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಾರಿಕೆಯಾಗಿತ್ತು ಹಾಗೂ ಪ್ರಧಾನಿಗೆ ರೈತರ ಪ್ರತಿಭಟನೆ ಕುರಿತು ಕಳವಳವಿದೆ ಎಂದು ತೋರಿಸುವ ಯತ್ನವಾಗಿತ್ತು ಎಂದು ವರದಿಯಾಗಿದೆ. ಹಿಂದಿ ವೆಬ್ ತಾಣ ಜುನ್‍ಪತ್ ಹಾಗೂ ನ್ಯಾಷನಲ್ ಹೆರಾಲ್ಡ್ ಈ ಕುರಿತಂತೆ ಪರಾಮರ್ಶಿಸಿದಾಗ ಪ್ರಧಾನಿ ಕಚ್ಛ್ ಗೆ ಭೇಟಿ ನೀಡಿದಾಗ ಅವರು ಮಾತುಕತೆ ನಡೆಸಿದ ರೈತರು ವಾಸ್ತವವಾಗಿ ರೈತರಲ್ಲ ಬದಲು ಸಿಖ್ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ.

ಅಲ್ಲದೆ, ಅಲ್ಲಿ ಕೃಷಿ ಕಾನೂನುಗಳ ಕುರಿತಂತೆ ಚರ್ಚೆ ನಡೆದಿಲ್ಲ ಬದಲಾಗಿ ಕಚ್ಛ್‍ನ ಲಖ್‍ಪತ್ ತಾಲೂಕಿನಲ್ಲಿ ನಿರ್ಮಾಣಗೊಳ್ಳಲಿರುವ ಗುರುದ್ವಾರದ ಕುರಿತು ಚರ್ಚೆ ನಡೆದಿದೆ. ಪ್ರಧಾನಿಯನ್ನು ಭೇಟಿಯಾದ ಈ ‘ರೈತರ’ ನಿಯೋಗದ ನೇತೃತ್ವವನ್ನು ಕಚ್ಛ್ ವಲಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಭಾಯಿ ಸರ್ದಾರ್ ಆಗಿದ್ದರು. ಕೇಸರಿ ರುಮಾಲು ಧರಿಸಿ ಪ್ರಧಾನಿಯ ಎದುರು ಅವರು ಕುಳಿತಿರುವುದು ಎಎನ್‍ಐ ಟ್ವೀಟ್ ಮಾಡಿದ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು www.nationalheraldindia.com ವರದಿ ಮಾಡಿದೆ.

ಎಎನ್‍ಐ ಹೊರತಾಗಿ ಗುಜರಾತ್ ಸಿಎಂ ವಿಜಯ್ ರುಪಾನಿ ಅವರ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರವೂ ಈ ಚಿತ್ರವನ್ನು ಟ್ವೀಟ್ ಮಾಡಲಾಗಿತ್ತಲ್ಲದೆ  ಅದರಲ್ಲಿ ಪ್ರಧಾನಿ 'ಕಚ್ಛ್ ನ ವಿವಿಧ ಸಂಘಸಂಸ್ಥೆಗಳನ್ನು, ಕರಕುಶಲಕರ್ಮಿ ಮಹಿಳೆಯರನ್ನು ಹಾಗೂ ಸಿಖ್ ರೈತರನ್ನು' ಭೇಟಿಯಾಗಿದ್ದರೆಂದು  ಹೇಳಲಾಗಿದೆ. ಅಷ್ಟೇ ಅಲ್ಲದೆ ರಾಜು ಸರ್ದಾರ್ ತಾನು ರೈತರ ನಿಯೋಗವನ್ನು ಪ್ರಧಾನಿ ಬಳಿ ಕೊಂಡೊಯ್ದಿದ್ದಾಗಿಯೂ ಹೇಳಿಕೊಂಡಿದ್ದರು.

ಪತ್ರಕರ್ತರೊಬ್ಬರು ಆ ನಿಯೋಗದಲ್ಲಿದ್ದ ರೈತರ ಜತೆ ಯಾವ ವಿಚಾರ ಚರ್ಚೆಯಾಯಿತೆಂದು ಕೇಳಿದಾಗ ಗುರುದ್ವಾರ ನಿರ್ಮಾಣ ಕುರಿತು ಚರ್ಚೆ ನಡೆದಿದೆ ಎಂದು ಆತ ಹೇಳಿದ್ದಾರೆ.

ಪ್ರಧಾನಿ ಭೇಟಿ ಸಮಯದಲ್ಲಿಯೇ ಕಚ್ಛ್ ನಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಆ ಸುದ್ದಿಯನ್ನು ಸುದ್ದಿ ಸಂಸ್ಥೆಗಳು ವಸ್ತುಶಃ ಬಹಿಷ್ಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News