×
Ad

ನವಭಾರತವು ಆತ್ಮ ನಿರ್ಭರ ಪರಿಕಲ್ಪನೆಯಡಿ ವೇಗವಾಗಿ ಸಾಗುತ್ತಿದೆ: ಪ್ರಧಾನಿ ಮೋದಿ

Update: 2020-12-19 22:18 IST

ಹೊಸದಿಲ್ಲಿ, ಡಿ.19: ಉತ್ಪಾದನಾ ಕ್ಷೇತ್ರದಿಂದ ತೆರಿಗೆ ಪದ್ಧತಿಯವರೆಗೆ ಸರಕಾರ ತಂದಿರುವ ಸುಧಾರಣಾ ಕ್ರಮಗಳು ಭಾರತವೇ ಏಕೆ ಎಂಬ ಜಾಗತಿಕ ಗ್ರಹಿಕೆಯನ್ನು ಭಾರತ ಯಾಕಾಗಬಾರದು ಎಂದು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೈಗಾರಿಕೆಗಳ ಒಕ್ಕೂಟ ‘ಅಸೋಚಮ್’ನ ಸ್ಥಾಪನಾ ದಿನಾಚರಣೆಯ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರು ತಿಂಗಳ ಹಿಂದೆ ಸರಕಾರ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಲಾಭ ತರಲು ಆರಂಭಿಸಿವೆ ಎಂದರು.

ಈ ಹಿಂದೆ ಭಾರತದಲ್ಲಿ ಹೂಡಿಕೆ ಮಾಡುವಾಗ ‘ಭಾರತದಲ್ಲಿ ಯಾಕೆ’ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಮೂಡುತ್ತಿತ್ತು. ಕಳೆದ ಸುಮಾರು 6 ವರ್ಷಗಳಿಂದ ತಂದಿರುವ ಸುಧಾರಣಾ ಕ್ರಮಗಳು ಮತ್ತದರ ಪರಿಣಾಮಗಳಿಂದ ಈ ಗ್ರಹಿಕೆ ‘ಭಾರತದಲ್ಲಿ ಯಾಕಾಗಬಾರದು’ ಎಂದು ಬದಲಾಗಿದೆ. ಅಪ್ರಚಲಿತ ಸುಮಾರು 1,500 ಕಾನೂನುಗಳನ್ನು ರದ್ದುಗೊಳಿಸಿ, ಇಂದಿನ ಪರಿಸ್ಥಿತಿಗೆ ಮತ್ತು ಹೂಡಿಕೆಗೆ ಪೂರಕವಾದ ಹೊಸ ಕಾನೂನುಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಭಾರತದಲ್ಲಿ ಇದ್ದ ಅಧಿಕ ತೆರಿಗೆ ದರವನ್ನು ಬದಲಿಸಿದ್ದು ಈಗ ಸ್ಪರ್ಧಾತ್ಮಕವಾದ ಕಾರ್ಪೊರೇಟ್ ತೆರಿಗೆ ಜಾರಿಗೊಳಿಸಲಾಗಿದೆ . ಈ ಹಿಂದೆ ಸರಕಾರಿ ಕಚೇರಿಗಳಲ್ಲಿ ಅತಿಯಾದ ಸಂಕೀರ್ಣತೆ, ನಿಯಮದಿಂದಾಗಿ ಕಾರ್ಯ ವಿಳಂಬವಾಗಿ ಸಾಗುತ್ತಿತ್ತು. ಆದರೆ ಈ ಸ್ಥಿತಿಯೂ ಬದಲಾಗಿದೆ. ಹೊಸ ಕಲ್ಪನೆ, ಬದಲಾವಣೆಗೆ ಅವಕಾಶವೇ ಇಲ್ಲದ ಕಾಲವೊಂದಿತ್ತು. ಆದರೆ ಈಗ ನವೋದ್ಯಮಗಳಿಗೆ ಪ್ರೋತ್ಸಾಹ , ಅವಕಾಶ ಮತ್ತು ನೆರವು ನೀಡುವ ವಾತಾವರಣವಿದೆ. ಇದರಿಂದ ವಿದೇಶೀ ಹೂಡಿಕೆದಾರರು ‘ಭಾರತದಲ್ಲಿ ಯಾಕಾಗಬಾರದು ? ಎಂದು ವಿಶ್ವಾಸದಿಂದ ಹೇಳುವಂತಾಗಿದೆ. ಈ ಹಿಂದೆ ಸರಕಾರದ ಹಸ್ತಕ್ಷೇಪ ಹೆಚ್ಚಿತ್ತು. ಆದರೆ ಈಗ ಖಾಸಗಿ ಕ್ಷೇತ್ರದ ಮೇಲೆ ಸರಕಾರ ವಿಶ್ವಾಸವಿರಿಸಿದೆ. ನವಭಾರತವು ಆತ್ಮನಿರ್ಭರ ಪರಿಕಲ್ಪನೆಯಡಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.

ಉತ್ಪಾದನೆ ಮತ್ತು ನಿರ್ಮಾಣ ಸಂಬಂಧಿತ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಸರಕಾರ ಗಮನ ಕೇಂದ್ರೀಕರಿಸಿದೆ. ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಜಾಗತಿಕವಾಗಿ ವಿಶ್ವಾಸ ವೃದ್ಧಿಸಿದೆ. ಕೊರೋನ ಸೋಂಕಿನ ಸಂದರ್ಭದಲ್ಲೂ ದಾಖಲೆ ಪ್ರಮಾಣದ ವಿದೇಶಿ ನೇರ ಹೂಡಿಕೆ ಮತ್ತು ವಿದೇಶಿ ಬಂಡವಾಳ ಹೂಡಿಕೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಮತ್ತು ಡಿ) ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಬೇಕಾಗಿದೆ. ಅಮೆರಿಕದಲ್ಲಿ ಆರ್ ಮತ್ತು ಡಿ ಕ್ಷೇತ್ರದ 70% ಹೂಡಿಕೆ ಖಾಸಗಿ ಕ್ಷೇತ್ರದಿಂದ ಬರುತ್ತದೆ. ಆದರೆ ಭಾರತದಲ್ಲಿ ಖಾಸಗಿ ಕ್ಷೇತ್ರದ ಪಾಲು ಕೇವಲ 30% ಮಾತ್ರ. ಐಟಿ, ಔಷಧ ಉತ್ಪಾದನೆ ಮತ್ತು ಸಾರಿಗೆ ಕ್ಷೇತ್ರದಲ್ಲೂ ಹೂಡಿಕೆ ಹೆಚ್ಚಬೇಕಾಗಿದೆ. ಕೈಗಾರಿಕೆಗಳು ಉತ್ತಮ ಸಾಂಸ್ಥಿಕ ಆಡಳಿತ ಮತ್ತು ಲಾಭ ಹಂಚಿಕೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News