ಕಾಂಗ್ರೆಸ್ ನ ಹಿರಿಯ ಮುಖಂಡ ಮೋತಿಲಾಲ್ ವೋರಾ ನಿಧನ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಮೋತಿಲಾಲ್ ವೋರಾ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳ ಹಿಂದೆ ಮೂತ್ರನಾಳ ಸೋಂಕಿನ ಕಾರಣಕ್ಕೆ ಒಖ್ಲಾದ ಎಸ್ಕೋಟ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಶ್ವಾಸಕೋಶ ಸೋಂಕು ಕೂಡ ಬಾಧಿಸಿತ್ತು. ಹೀಗಾಗಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಡಲಾಗಿತ್ತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ವೋರಾ ಅವರ ಅಂತ್ಯಕ್ರಿಯೆಯನ್ನು ಛತ್ತೀಸ್ ಗಢದಲ್ಲಿ ನಡೆಸಲಾಗುತ್ತದೆ. ಇಂದು ಅಥವಾ ನಾಳೆ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಸಾಗಿಸಲಾಗುತ್ತದೆ.
ವೋರಾ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ವೋರಾ ನಿಧನ ನನಗೆ ಬೇಸರ ತಂದಿದೆ. ವಿಶಾಲವಾದ ಆಡಳಿತಾತ್ಮಕ ಹಾಗೂ ಸಂಘಟನಾತ್ಮಕ ಅನುಭವವಿರುವ ನಾಯಕನಾಗಿ ಅವರು ಸದಾ ಸ್ಮರಣೀಯರಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕನಾಗಿದ್ದರು’’ ಎಂದು ಮೋದಿ ಅವರು ಟ್ವೀಟಿಸಿದ್ದಾರೆ.
“ವೋರಾ ನೈಜ ಕಾಂಗ್ರೆಸ್ ನಾಯಕ ಹಾಗೂ ಅದ್ಭುತ ವ್ಯಕ್ತಿಯಾಗಿದ್ದರು’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ವೋರಾ ಈ ವರ್ಷದ ಎಪ್ರಿಲ್ ತನಕ ಛತ್ತೀಸ್ ಗಢದಿಂದ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷವನ್ನು ಪುನರ್ ರಚಿಸುವ ತನಕ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.