ಬೆಂಗಳೂರಿನಲ್ಲಿ ಅಸ್ಸಾಂ ವಿದ್ಯಾರ್ಥಿನಿಯ ಶಂಕಾಸ್ಪದ ಸಾವು; ನ್ಯಾಯಕ್ಕಾಗಿ ಸಂತ್ರಸ್ತೆಯ ಹುಟ್ಟೂರಿನಲ್ಲಿ ಪ್ರತಿಭಟನೆ
ಗುವಹಾತಿ: ಬೆಂಗಳೂರಿನ ನರ್ಸಿಂಗ್ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿಗಾಗಿ ಆಗಮಿಸಿದ್ದ ಅಸ್ಸಾಂನ ಬರ್ಪೇಟ ಜಿಲ್ಲೆಯ ಹೌಲಿ ಎಂಬ ಪಟ್ಟಣದ 20 ವರ್ಷದ ವಿದ್ಯಾರ್ಥಿನಿಯ ಶಂಕಿತ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆಕೆಯ ಹುಟ್ಟೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಗಿದೆ. ಶುಕ್ರವಾರ ರಾತ್ರಿ ಆಕೆಯ ಅಂತ್ಯಕ್ರಿಯೆ ನಡೆದ ನಂತರ ಹೌಲಿ ಪಟ್ಟಣದ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಬೆಂಗಳೂರು ಪೊಲೀಸರು ಈ ಪ್ರಕರಣದ ಕೂಲಕಂಕಷ ತನಿಖೆ ನಡೆಸಬೇಕೆಂದೂ ಆಗ್ರಹಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.
ಯುವತಿ ಬೆಂಗಳೂರಿನಲ್ಲಿ ಅಸ್ಸಾಂ ಮೂಲದ 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಅನೀಸುರ್ ರೆಹಮಾನ್ ನಿವಾಸದಲ್ಲಿ ಶಂಕಾಸ್ಪದವಾಗಿ ಸಾವಿಗೀಡಾಗಿದ್ದರಿಂದ ಪೊಲೀಸರು ರೆಹಮಾನ್‍ನನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಸಂತ್ರಸ್ತೆಯ ತಂದೆ ಸರಕಾರಿ ಆಸ್ಪತ್ರೆಯೊಂದರ ಲ್ಯಾಬ್ ಟೆಕ್ನಿಷಿಯನ್ ಆಗಿದ್ದಾರೆ. ಉತ್ತಮ ಶಿಕ್ಷಣ ಪಡೆಯುವ ಉದ್ದೇಶದಿಂದ ಆಕೆ ಬೆಂಗಳೂರಿಗೆ ತೆರಳಿದ್ದಳು. ಆಕೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಕೂಲಂಕಷ ತನಿಖೆ ನಂತರ ಬಂಧಿತ ಆರೋಪಿಯೇ ತಪ್ಪಿತಸ್ಥನೆಂದು ಕಂಡು ಬಂದರೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಕೆಯ ಊರಿನ ಜನ ಆಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅನೀಸುರ್ ರೆಹಮಾನ್ ಮನೆ ಮಾಲಕ ನೀಡಿದ ದೂರಿನಲ್ಲಿ ಆತ ಸಂತ್ರಸ್ತೆ ಪ್ರಜ್ಞಾಹೀನಳಾಗಿ ಬಿದ್ದಿರುವುದು ಹಾಗೂ ಆಕೆಯ ಜನನಾಂಗದ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದುದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆಕೆಯನ್ನು ತಕ್ಷಣ ರೆಹಮಾನ್ ಮತ್ತಾತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆಕೆಯ ಮೇಲೆ ಅತ್ಯಾಚಾರವಾಗಿದೆಯೇ ಎಂದು ಇನ್ನೂ ತಿಳಿದು ಬಂದಿಲ್ಲ, ಪೋಸ್ಟ್ ಮಾರ್ಟಂ ವರದಿ ಇನ್ನಷ್ಟೇ ದೊರೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಖ್ ಹಾಗೂ ಎಐಯುಡಿಎಫ್ ಸಂಸದ ಬದ್ರುದ್ದೀನ್ ಅಜ್ಮಲ್ ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.