×
Ad

ಕೋವಿಡ್-19:ಲಂಡನ್‌ನ ಅಂಗಡಿಗಳಲ್ಲಿ ನಕಲಿ ‘ನಿರೋಧಕ ಶಕ್ತಿ ವರ್ಧಕ’ದ ಮಾರಾಟ: ವರದಿ

Update: 2020-12-21 18:05 IST

ಹೊಸದಿಲ್ಲಿ,ಡಿ.21‘: ಲಂಡನ್‌ನ ಅಂಗಡಿಗಳಲ್ಲಿ ನಕಲಿ ‘ಕೋವಿಡ್-19 ನಿರೋಧಕ ಶಕ್ತಿ ವರ್ಧಕ ’ಗಳು ಮಾರಾಟವಾಗುತ್ತಿರುವುದು  BBC, ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ.

ಭಾರತದಲ್ಲಿ ತಯಾರಾದ ಗಿಡಮೂಲಿಕೆ ಔಷಧಿ ಕೊರೊನಿಲ್ ಲಂಡನ್‌ನಾದ್ಯಂತ, ವಿಶೇಷವಾಗಿ ಏಷ್ಯನ್ನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ಕೊರೊನಿಲ್ ಅನ್ನು ತಯಾರಿಸುತ್ತಿರುವ ಪತಂಜಲಿ ಆಯುರ್ವೇದ್,ಈ ಮಾತ್ರೆ ಶ್ವಾಸನಾಳ ಸೋಂಕುಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ.

ಕೊರೊನಿಲ್ ಮಾತ್ರೆ ಕೊರೋನ ವೈರಸ್ ವಿರುದ್ಧ ಯಾವುದೇ ರಕ್ಷಣೆಯನ್ನು ಒದಗಿಸುವುದಿಲ್ಲ ಎನ್ನುವುದನ್ನು ಬಿಬಿಸಿಗಾಗಿ ನಡೆಸಲಾದ ಪರೀಕ್ಷೆಗಳು ತೋರಿಸಿವೆ.

BBC,ಯ ಕೋರಿಕೆಯಂತೆ ಬರ್ಮಿಂಗ್‌ಹ್ಯಾಮ್ ವಿವಿಯು ಕೊರೊನಿಲ್ ಔಷಧಿಯನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೊಳಪಡಿಸಿದ್ದು,ಈ ಮಾತ್ರೆಗಳು ಸಸ್ಯಜನ್ಯ ಘಟಕಗಳನ್ನು ಒಳಗೊಂಡಿವೆ ಮತ್ತು ಇವು ಕೋವಿಡ್-19 ವಿರುದ್ಧ ರಕ್ಷಣೆಯನ್ನು ನೀಡುವುದಿಲ್ಲ ಎನ್ನುವುದು ರುಜುವಾತಾಗಿದೆ ಎಂದು ವರದಿಯಾಗಿದೆ.

ಕೊರೋನ ವೈರಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ನಿರೋಧಕ ಶಕ್ತಿಯನ್ನು ‘ಹೆಚ್ಚಿಸುವ ’ ಪರಿಕಲ್ಪನೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ ವೈರಾಣು ಶಾಸ್ತ್ರಜ್ಞೆ ಡಾ.ಮೈತ್ರೇಯಿ ಶಿವಕುಮಾರ ಅವರು,‘ನಮ್ಮ ನಿರೋಧಕ ವ್ಯವಸ್ಥೆಯು ವೈರಸ್‌ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರಲ್ಲಿ ಹಲವಾರು ಸೂಕ್ಷ್ಮವ್ಯತ್ಯಾಸಗಳಿವೆ. ನಿರೋಧಕತೆಯನ್ನು ಹೆಚ್ಚಿಸುವುದು ವೈರಸ್ ವಿರುದ್ಧ ಹೋರಾಟಕ್ಕೆ ನೆರವಾಗುತ್ತದೆಯೇ ಎನ್ನುವುದೂ ನಮಗೆ ಗೊತ್ತಿಲ್ಲ ’ಎಂದು ತಿಳಿಸಿದರು. ಕೊರೊನಿಲ್ ನಿರೋಧಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದರು.

ಕೋವಿಡ್-19 ಮತ್ತು ‘ನಿರೋಧಕ ವರ್ಧಕ ’ಗಳನ್ನು ಉಲ್ಲೇಖಿಸುವುದನ್ನು ಬ್ರಿಟನ್‌ನ ಜಾಹೀರಾತು ನಿಯಮಗಳು ನಿಷೇಧಿಸಿವೆ.

ವೆಂಬ್ಲೆಯಲ್ಲಿಯ ಔಷಧಿ ಮಳಿಗೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ಮತ್ತು ಮಾರಾಟದ ಕೌಂಟರ್‌ನಲ್ಲಿ ಕೊರೊನಿಲ್ ಅನ್ನು ‘ಕೋವಿಡ್-19 ನಿರೋಧಕ ಶಕ್ತಿ ವರ್ಧಕ ’ಎಂದೇ ಪ್ರಚಾರ ಮಾಡುತ್ತಿದೆ.

ಕೋವಿಡ್-19 ಸೋಂಕನ್ನು ಗುಣಪಡಿಸುತ್ತದೆ ಎಂದು ಹೇಳಿ ಈ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಕನಿಷ್ಠ ನಾಲ್ಕು ಇತರ ಔಷಧಿ ಮಳಿಗೆಗಳನ್ನು ಬಿಬಿಸಿ ಪತ್ತೆ ಹಚ್ಚಿದೆ.

‘ನನಗೆ 78 ವರ್ಷ ವಯಸ್ಸಾಗಿದೆ. ಶಾಪಿಂಗ್‌ಗೆಂದು ನಾನು ಹೊರಗಡೆ ಹೋದರೆ ಯಾರಿಂದಲಾದರೂ ಸೋಂಕು ತಗಲಬಹುದು. ಹೀಗಾಗಿ ನನ್ನನ್ನು ರಕ್ಷಿಸಿಕೊಳ್ಳಲು ಕೊರೊನಿಲ್ ತೆಗೆದುಕೊಳ್ಳುತ್ತಿದ್ದೇನೆ ’ಎಂದು ಔಷಧಿ ಮಳಿಗೆಯಲ್ಲಿಯ ಗ್ರಾಹಕರೋರ್ವರು ಬಿಬಿಸಿಗೆ ತಿಳಿಸಿದರು.

ಜಾಹೀರಾತು ಮಾನದಂಡಗಳ ಪ್ರಾಧಿಕಾರ ತಿಳಿಸಿರುವಂತೆ ಯಾವುದೇ ವಸ್ತುವು ನಿರೋಧಕ ಶಕ್ತಿಯನ್ನು ‘ಹೆಚ್ಚಿಸುತ್ತದೆ ’ಎಂಬ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಯಾವುದೇ ಉತ್ಪನ್ನವು ಔಷಧಿಗಳು ಮತ್ತು ಆರೋಗ್ಯ ರಕ್ಷಣೆ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ(ಎಂಎಚ್‌ಆರ್‌ಎ)ಯ ಪರವಾನಿಗೆಯನ್ನು ಹೊಂದಿರದಿದ್ದರೆ ಅದು ಕೊರೋನ ವೈರಸ್‌ಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಿಕೊಳ್ಳುವಂತಿಲ್ಲ.

ಯಾವುದೇ ವಿಧದಲ್ಲಿ ಕೊರೊನಿಲ್ ಬಳಕೆಗೆ ಎಂಎಚ್‌ಆರ್‌ಎ ಅನುಮತಿಯನ್ನು ನೀಡಿಲ್ಲ. ಬ್ರಿಟನ್‌ನ ಮಾರುಕಟ್ಟೆಗಳಲ್ಲಿ ಅನಧಿಕೃತ ಔಷಧಿಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅದು ಹೇಳಿದೆ.

ಕೊರೊನಿಲ್ ಕೋರೋನ ವೈರಸ್ ರೋಗಿಗಳನ್ನು ಗುಣಪಡಿಸಿದೆ ಎಂದು ಪತಂಜಲಿ ಆಯುರ್ವೇದ್‌ನ ಸ್ಥಾಪಕ ಬಾಬಾ ರಾಮದೇವ ಅವರು ಕಳೆದ ಜೂನ್‌ನಲ್ಲಿ ಹೇಳಿಕೊಂಡಿದ್ದರು. ಆದರೆ ಇದನ್ನು ಭಾರತ ಸರಕಾರವು ಒಪ್ಪಿರಲಿಲ್ಲ. ಪತಂಜಲಿಯು ಕೊರೊನಿಲ್ ಅನ್ನು ನಿರೋಧಕತೆ ವರ್ಧಕವನ್ನಾಗಿ ಮಾರಾಟ ಮಾಡಬಹುದೇ ಹೊರತು ಕೋವಿಡ್-19 ಔಷಧಿಯನ್ನಾಗಿ ಅಲ್ಲ ಎಂದು ಅದು ಹೇಳಿತ್ತು.

ಕೊರೊನಿಲ್ ಕೋವಿಡ್-19 ಅನ್ನು ಗುಣಪಡಿಸುತ್ತದೆ ಎನ್ನುವ ತನ್ನ ಹೇಳಿಕೆಯನ್ನು ಪತಂಜಲಿ ಈಗಾಗಲೇ ಹಿಂದೆಗೆದುಕೊಂಡಿದೆ.

ಇಂತಹ ತಪ್ಪು ಮಾಹಿತಿಗಳು ಜನರ ಆರೋಗ್ಯವನ್ನೂ ಹಾಳು ಮಾಡುತ್ತವೆ,ದುಡ್ಡನ್ನೂ ಹಾಳು ಮಾಡುತ್ತವೆ ಎಂದು ಸ್ವತಂತ್ರ ಸತ್ಯಶೋಧನಾ ಸಂಸ್ಥೆ ‘ಫುಲ್ ಫ್ಯಾಕ್ಟ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News