ಪ್ರಧಾನಿ, ಶಾ ಜವಾಬ್ದಾರರು: ಆತ್ಮಹತ್ಯೆಗೆ ಯತ್ನಿಸಿದ ರೈತನ ಹೇಳಿಕೆ

Update: 2020-12-21 15:05 GMT

ಹೊಸದಿಲ್ಲಿ, ಡಿ.21: ಕೇಂದ್ರದ ಕೃಷಿ ಕಾಯ್ದೆಗಳ ವಿರೋಧಿಸಿ ರೈತ ಸಂಘದ ಆಶ್ರಯದಲ್ಲಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಂಜಾಬ್‌ನ ರೈತ ನಿರಂಜನ್ ಸಿಂಗ್ ಸೋಮವಾರ ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

‘ಓರ್ವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅದಕ್ಕೆ ಜವಾಬ್ದಾರನಾಗಿರುವ ವ್ಯಕ್ತಿಯನ್ನು ಶಿಕ್ಷಿಸಲಾಗುತ್ತದೆ. ನನ್ನ ಆತ್ಮಹತ್ಯೆ ಪ್ರಯತ್ನದ ಹೊಣೆಯನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೊರಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ನಿರಂಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಆತ್ಮಹತ್ಯೆಯಂತಹ ಘಟನೆ ನಡೆದರೂ ಸರಕಾರ ಪ್ರತಿಕ್ರಿಯಿಸುತ್ತಿಲ್ಲ. ರೈತರು ಉಳಿಯದಿದ್ದರೆ ಬೇರೆಯವರು ಉಳಿಯಲು ಸಾಧ್ಯವಿದೆಯೇ ? ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಈ ಮಧ್ಯೆ, ದಿಲ್ಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್‌ನ ಫಿರೋಜ್‌ಪುರದ ರೈತ ಕುಲ್‌ಬೀರ್ ಸಿಂಗ್ ಸೋಮವಾರ ಊರಿಗೆ ಮರಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಸುಮಾರು 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಸುಮಾರು 1 ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಸಂದರ್ಭ ಸುಮಾರು 30 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News