ಪಂಜಾಬ್ ಗಡಿ ಬಳಿ ಪಾಕ್ ಡ್ರೋನ್ ಕೆಳಗಿಳಿಸಿದ 11 ಗ್ರೆನೇಡ್ ಪತ್ತೆ

Update: 2020-12-21 15:13 GMT

ಅಮೃತಸರ, ಡಿ.21: ಪಂಜಾಬ್‌ನ ಗುರುದಾಸ್ ಪುರ ಜಿಲ್ಲೆಯ ಅಂತರ್ ರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಪಾಕಿಸ್ತಾನ ನಿರ್ಮಿತ 11 ಗ್ರೆನೇಡ್‌ಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನದ ಗಡಿಭಾಗದಿಂದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯತ್ತ ಹಾರಿ ಬಂದ ಡ್ರೋನ್‌ನಿಂದ ಈ ಗ್ರೆನೇಡ್‌ಗಳನ್ನು ಭಾರತದ ನೆಲದೊಳಗೆ ಇಳಿಸಲಾಗಿದೆ. ಡಿಸೆಂಬರ್ 19ರ ಮಧ್ಯರಾತ್ರಿ ಪಂಜಾಬ್ ಗಡಿಬಳಿ ಪಾಕಿಸ್ತಾನದ ಡ್ರೋನ್ ಹಾರುತ್ತಿರುವುದನ್ನು ಪತ್ತೆಹಚ್ಚಿದ ಗಡಿಭದ್ರತಾ ಪಡೆ ಅದರತ್ತ ಗುಂಡಿನ ದಾಳಿ ನಡೆಸಿದೆ.

ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಗ್ರೆನೇಡ್ ಪತ್ತೆಯಾಗಿದೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಈ ಗ್ರೆನೇಡ್‌ಗಳನ್ನು ತಯಾರಿಸಿರುವ ಸಾಧ್ಯತೆಯಿದೆ ಎಂದು ಗುರುದಾಸ್‌ಪುರ ಹಿರಿಯ ಪೊಲೀಸ್ ಅಧೀಕ್ಷಕ ರಾಜಿಂದರ್ ಸಿಂಗ್ ಸೊಹಾಲ್ ಹೇಳಿದ್ದಾರೆ. ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ಆರ್ಜಸ್ ಎಚ್‌ಜಿ-84 ಮಾದರಿಯ ಗ್ರೆನೇಡ್‌ಗಳನ್ನು ಈ ಹಿಂದೆ ಪಾಕ್ ಬೆಂಬಲಿತ ಉಗ್ರರು ಭಾರತದಲ್ಲಿ ನಡೆಸಿದ್ದ 2008ರ ಮುಂಬೈ ದಾಳಿ, 1993ರ ಮುಂಬೈ ಸರಣಿ ಸ್ಫೋಟ, 2001ರ ಸಂಸತ್ ಭವನದ ಮೇಲಿನ ದಾಳಿ ಪ್ರಕರಣಗಳಲ್ಲಿ ಬಳಸಲಾಗಿದೆ.

ಆಸ್ಟ್ರಿಯಾ ದೇಶದ ಸಂಸ್ಥೆಯೊಂದು ನಿರ್ಮಿಸುವ ಈ ಗ್ರೆನೇಡ್‌ಗಳ ಉತ್ಪಾದನೆಯ ಫ್ರಾಂಚೈಸಿಯನ್ನು ರಾವಲ್ಪಿಂಡಿಯ ವಾ ಕಂಟೋನ್‌ಮೆಂಟ್ ಶಸ್ತ್ರಾಸ್ತ್ರ ಕಾರ್ಖಾನೆ ಪಡೆದುಕೊಂಡಿದೆ. ಗ್ರೆನೇಡ್‌ಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಮರದ ಪೆಟ್ಟಿಗೆಯಲ್ಲಿರಿಸಿ ಹಗ್ಗ ಕಟ್ಟಿ ಡ್ರೋನ್ ಮೂಲಕ ಗುರುದಾಸ್‌ಪುರದ ಬಳಿ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಭಾರತದೊಳಗೆ ಶಸ್ತ್ರಾಸ್ತ್ರ ರವಾನಿಸಲು ಡ್ರೋನ್‌ಗಳನ್ನು ಬಳಸುತ್ತಿರುವ ಸಾಧ್ಯತೆಯಿದೆ. ಡ್ರೋನ್ ಮೂಲಕ ಗಡಿ ಭಾಗದಲ್ಲಿರುವ ಭದ್ರತಾ ಪಡೆಗಳ ಶಿಬಿರಗಳ ಮೇಲೆ ಸ್ಫೋಟಕ ಎಸೆಯುವ ಸಂಚು ಹೂಡಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ಭದ್ರತಾ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News