×
Ad

ಗುಜರಾತ್: ಅಹ್ಮದ್ ಪಟೇಲ್, ಭಾರದ್ವಾಜ್ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಪ್ರತ್ಯೇಕ ಚುನಾವಣೆ

Update: 2020-12-21 20:49 IST

ಹೊಸದಿಲ್ಲಿ: ಸಂಸದರಾದ ಅಹ್ಮದ್ ಪಟೇಲ್ ಹಾಗೂ ಅಭಯ್ ಭಾರದ್ವಾಜ್ ನಿಧನದಿಂದಾಗಿ ತೆರವಾಗಿರುವ ಗುಜರಾತ್ ನ ಎರಡು ರಾಜ್ಯಸಭಾ ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ. ಕೋವಿಡ್ -19ನಿಂದಾಗಿ ಪಟೇಲ್ ಹಾಗೂ ಭಾರದ್ವಾಜ್ ನಿಧನರಾಗಿದ್ದರು.

ರಾಜ್ಯಸಭಾ ಸ್ಥಾನಗಳು ತೆರವಾಗಿರುವ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿದೆ.

ಕೇಂದ್ರ ಚುನಾವಣಾ ಆಯೋಗವು ಗುಜರಾತ್ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯಸಭಾ ಉಪ ಚುನಾವಣೆಗೆ ಅಗತ್ಯವಿರುವ ವ್ಯವಸ್ಥೆಗಳನ್ನುಮಾಡಲು ರಿಟರ್ನಿಂಗ್ ಆಫೀಸರ್ ವೊಬ್ಬರನ್ನು ಆಯ್ಕೆ ಮಾಡುವಂತೆ ನಿರ್ದೇಶನ ನೀಡಿದೆ. ಉಪ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸುವಂತೆಯೂ ಸೂಚಿಸಿದೆ. ಉಪಚುನಾವಣೆಯ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.

ಅಹ್ಮದ್ ಪಟೇಲ್ 2023ರ ಆಗಸ್ಟ್ 18ರ ತನಕ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಭಯ್ ಅವರ ಅಧಿಕಾರದ ಅವಧಿಯು ಜೂನ್ 21,2026ರ ತನಕ ಇತ್ತು.

ಒಂದು ವೇಳೆ ರಾಜ್ಯಸಭಾ ಚುನಾವಣೆಯು ಏಕಕಾಲದಲ್ಲಿ ನಡೆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ತಲಾ ಒಂದು ಸ್ಥಾನ ಲಭಿಸುವ ಸಾಧ್ಯತೆಯಿತ್ತು. ಪ್ರತ್ಯೇಕ ಚುನಾವಣೆ ನಡೆದರೆ ಬಿಜೆಪಿಗಾಗಲಿ, ಕಾಂಗ್ರೆಸ್ ಗಾಗಲಿ  91 ಶಾಸಕರ ಬೆಂಬಲದ ಅಗತ್ಯವಿರುತ್ತದೆ. ಈಗ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 111 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ ಬಳಿ 65 ಶಾಸಕರಿದ್ದಾರೆ. ಹೀಗಾಗಿ ಇದರಿಂದ ಬಿಜೆಪಿಗೆ ಎರಡೂ ಸ್ಥಾನ ಗೆಲ್ಲುವ ಅವಕಾಶ ಅಧಿಕವಿದೆ.

2 ರಾಜ್ಯಸಭಾ ಸೀಟಿಗೆ ಚುನಾವಣೆ ಪ್ರತ್ಯೇಕವಾಗಿ ನಡೆದರೆ ಬಿಜೆಪಿಗೆ ಈಗಿರುವ ಶಾಸಕರ ಬೆಂಬಲವೇ ಸಾಕಾಗುತ್ತದೆ.

ಈ ಹಿಂದೆ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಪ್ರತ್ಯೇಕ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಇದನ್ನು ಪ್ರಶ್ನಿಸಿ  ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣವು ಈಗಲೂ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News