ರಜನೀಕಾಂತ್‌ಗೆ ಮತ್ತೆ ಸಮನ್ಸ್
Update: 2020-12-21 20:55 IST
ಚೆನ್ನೈ, ಡಿ.21: ತೂತುಕುಡಿ ಪೊಲೀಸ್ ಗೋಲಿಬಾರ್ ಪ್ರಕರಣದ ತನಿಖೆ ನಡೆಸುತ್ತಿರುವ ಏಕಸದಸ್ಯ ಆಯೋಗವು ವಿಚಾರಣೆಗೆ ಹಾಜರಾಗುವಂತೆ ನಟ ರಜನೀಕಾಂತ್‌ಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿದೆ.
ತೂತುಕುಡಿ ತಾಮ್ರಘಟಕ ಕಾರ್ಖಾನೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಗೋಲೀಬಾರ್ ನಡೆಸಿದ್ದರು. ಪ್ರಕರಣದಲ್ಲಿ ಸಂತ್ರಸ್ತರ ಮನೆಗೆ 2018ರ ಮೇ ತಿಂಗಳಿನಲ್ಲಿ ಭೇಟಿ ನೀಡಿದ್ದ ರಜನೀಕಾಂತ್ ಗೋಲೀಬಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಎದುರು ಹಾಜರಾಗಿ ವಿವರಣೆ ನೀಡುವಂತೆ ರಜನೀಕಾಂತ್‌ಗೆ ಈ ವರ್ಷದ ಫೆಬ್ರವರಿಯಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಇದೀಗ 2021ರ ಜನವರಿ 19ರಂದು ನಡೆಯುವ 24ನೇ ಹಂತದ ವಿಚಾರಣೆ ಸಂದರ್ಭ ತೂತುಕುಡಿ ಕ್ಯಾಂಪ್ ಕಚೇರಿಗೆ ಆಗಮಿಸಿ ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ರಜನೀಕಾಂತ್‌ಗೆ ಮತ್ತೊಮ್ಮೆ ಸಮನ್ಸ್ ಹೊರಡಿಸಲಾಗಿದೆ ಎಂದು ಮೂಲಗಳು ಹೇಳಿವೆ.