ಮೊಬೈಲ್ ಫೋನ್ ಸಾಲ ವಂಚನೆ ಪ್ರಕರಣ: ನಾಲ್ವರ ಬಂಧನ
ಗಾಂಧೀನಗರ, ಡಿ.21: ಮುದ್ರಾ ಯೋಜನೆಯಡಿ ಸಂಗ್ರಹಿಸಿದ ಗುರುತು ಚೀಟಿಯನ್ನು ಬಳಸಿ, ಬೇರೆಯವರ ಹೆಸರಿನಲ್ಲಿ ದುಬಾರಿ ಬೆಲೆಯ ಮೊಬೈಲ್ ಪೋನ್‌ಗಳನ್ನು ಸಾಲದಲ್ಲಿ ಖರೀದಿಸಿ ಬಳಿಕ ಅವುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಓರ್ವ ವ್ಯಕ್ತಿ ಮುದ್ರಾ ಯೋಜನೆಯಡಿ ಸಾಲ ಪಡೆದಿದ್ದು ಈ ಸಂದರ್ಭ ತನ್ನ ಗುರುತು ಚೀಟಿಯನ್ನು ಒದಗಿಸಿದ್ದ. ಈ ವ್ಯಕ್ತಿಯ ಗುರುತು ಚೀಟಿ ಮತ್ತಿತರ ದಾಖಲೆಗಳ ವಿವರವನ್ನು ಅಕ್ರಮವಾಗಿ ಪಡೆದುಕೊಂಡ ವಂಚಕರು, ಬಳಿಕ ಅದರ ಆಧಾರದಲ್ಲಿ 1.20 ಲಕ್ಷ ಬೆಲೆಬಾಳುವ ಮೊಬೈಲ್ ಖರೀದಿಸಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಈ ಬಗ್ಗೆ ಸಂತ್ರಸ್ತ ವ್ಯಕ್ತಿಯ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಜೊತೆಗೆ, ಸಾಲದ ಮೊದಲ ಕಂತನ್ನೂ ಈತನ ಖಾತೆಯಿಂದಲೇ ಪಡೆಯಲಾಗಿದೆ. ಸಾಲದಲ್ಲಿ ಖರೀದಿಸಿದ ಮೊಬೈಲನ್ನು ಆರೋಪಿಗಳು ಮಾರಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಂಚನೆಯ ಬಗ್ಗೆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಓರ್ವ ವ್ಯಕ್ತಿ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದರೆ, ಇಬ್ಬರು ಮೊಬೈಲ್ ಫೋನ್‌ಗಳ ವ್ಯವಹಾರ ನಡೆಸುತ್ತಿದ್ದಾರೆ. ನಾಲ್ಕನೆಯ ವ್ಯಕ್ತಿ ಆಧಾರ್, ಪಾನ್ ಕಾರ್ಡ್‌ಗಳನ್ನು ಮಾಡಿಕೊಡುವ ಏಜೆನ್ಸಿ ಹೊಂದಿದ್ದ. ಇವರು ಇದೇ ರೀತಿ 10 ಜನರಿಗೆ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.