ಅಮೆರಿಕದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯ ಮೇಲೆ ಗುಂಡು ಹಾರಾಟ
ಹೈದರಾಬಾದ್: ಅಮೆರಿಕದ ಚಿಕಾಗೋದಲ್ಲಿ ಹೈದರಾಬಾದ್ ಮೂಲದ 43ರ ವಯಸ್ಸಿನ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿದೆ. ಗುಂಡು ಹಾರಾಟದಿಂದಾಗಿ ವ್ಯಕ್ತಿ ಗಾಯಗೊಂಡಿರುವುದಾಗಿ ಅವರ ಕುಟುಂಬ ಸದಸ್ಯರು ಸೋಮವಾರ ತಿಳಿಸಿದ್ದಾರೆ.
ಮುಹಮ್ಮದ್ ಮುಜೀಬುದ್ದೀನ್ ಸೋಮವಾರ ಮುಂಜಾನೆ ಗುಂಡಿನ ದಾಳಿಗೆ ಒಳಗಾಗಿದ್ದು, ಗಾಯಗೊಂಡಿದ್ದ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಜೀಬುದ್ದೀನ್ ಪತ್ನಿ ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಜೀಬುದ್ದೀನ್ ಅವರ ಪತ್ನಿ, ಮಕ್ಕಳು ಹಗೂ ಅವರ ತಾಯಿ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಅಮೆರಿಕದಲ್ಲಿರುವ ಮುಜೀಬುದ್ದೀನ್ ಅವರ ರೂಮ್‌ಮೇಟ್ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ನನ್ನ ಇಡೀ ಕುಟುಂಬ ಆಘಾತದ ಸ್ಥಿತಿಯಲ್ಲಿದೆ. ನನ್ನ ಪತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅವರನ್ನು ಸಂಪರ್ಕಿಸಲು ಹಾಗೂ ವೈದ್ಯಕೀಯ ನೆರವು ನೀಡುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಭಾರತೀಯ ದೂತವಾಸವನ್ನು ಕೇಳಲು ವಿನಂತಿಸಲಾಗಿದೆ ಎಂದು ಮುಜೀಬುದ್ದೀನ್ ಪತ್ನಿ ಪತ್ರದಲ್ಲಿ ತಿಳಿಸಿದ್ದಾರೆ.